ಮಂಗಳೂರು: ಕೋವಿಡ್ ಸಂದರ್ಭದಲ್ಲಿ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ತಂಡ ರೋಗಿಗಳ ಪ್ರಾಣ ಉಳಿಸುವಲ್ಲಿ ಮಹತ್ವದ ಕಾರ್ಯ ನಿರ್ವಹಿಸಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ವೆನ್ಲಾಕ್ ಆಸ್ಪತ್ರೆ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ದ.ಕ ಜಿಲ್ಲೆ. ಯುವ ರೆಡ್ ಕ್ರಾಸ್ ಘಟಕ ಮಂಗಳೂರು ವಿಶ್ವ ವಿದ್ಯಾನಿಲಯ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ(ರಿ) ಸಮುದಾಯ ವಾಚನಾಲಯ ಸಮನ್ವಯ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ವೆನ್ಲಾಕ್ ಆಸ್ಪತ್ರೆಯ ಆವರಣದಲ್ಲಿಂದು ಸಮುದಾಯ ವಾಚನಾಲಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡುತ್ತಿದ್ದರು.
ಕೋವಿಡ್ ಸಂದರ್ಭದಲ್ಲಿ ರೋಗಿಗಳಿಗೆ ಆಮ್ಲಜನಕದ ತುರ್ತು ಅಗತ್ಯವಿತ್ತು. ಆಮ್ಲಜನಕ ಸಹಿತವಾದ ಹಾಸಿಗೆಗಳ ಸಂಖ್ಯೆ ಯೂ ಕಡಿಮೆ ಇತ್ತು. ಕೇರಳದಿಂದ, ಬಳ್ಳಾರಿಯಿಂದ ಆಮ್ಲಜನಕ ತಯಾರಿಕಾ ಘಟಕಗಳಿಂದ ಆಮ್ಲಜನಕ ಪೂರೈಕೆ ಯಾಗುತ್ತಿತ್ತು. ಸ್ವಲ್ಪ ಯಾಮಾರಿದರೂ ಕೋವಿಡ್ ರೋಗಿಗಳಿಗೆ ಆಮ್ಲಜನಕದ ಕೊರತೆಯಿಂದ ಪ್ರಾಣಾಪಾಯ ಉಂಟಾಗುವ ಸ್ಥಿತಿ ಉಂಟಾಗಿತ್ತು. ಆದರೆ ಆ ಬಳಿಕದ ದಿನಗಳಲ್ಲಿ ಸಾಕಷ್ಟು ಮುಂಜಾಗ್ರತೆ ವಹಿಸಿಕೊಂಡ ಕಾರಣ ಇಂದು ವೆನ್ಲಾಕ್ ಆಸ್ಪತ್ರೆ ಸುಸಜ್ಜಿತ ವಾದ ಆಮ್ಲಜನಕ ಪೂರೈಸುವ ಘಟಕ ಹೊಂದಿದೆ. ಆಮ್ಲಜನಕ ಸಹಿತದ ಹಾಸಿಗೆಗಳ ಸಂಖ್ಯೆ ಹೆಚ್ಚಳವಾಗಿದೆ. ಕೋವಿಡ್ ಸಂದರ್ಭದಲ್ಲಿ ಹಗಲು, ರಾತ್ರಿ ರೋಗಿಗಳ ಆರೈಕೆಯಲ್ಲಿ ತೊಡಗಿ ಅವರ ಜೀವ ಉಳಿಸಲು ಕಾರಣರಾದ ವೆನ್ಲಾಕ್ ವೈದ್ಯರು, ಸಿಬ್ಬಂದಿಗಳ ತಂಡವನ್ನು ಅಭಿನಂದಿಸಿ ಅವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಶಾಸಕ ವೇದ ವ್ಯಾಸ ಕಾಮತ್ ತಿಳಿಸಿದ್ದಾರೆ.
ವೆನ್ಲಾಕ್ ಆಸ್ಪತ್ರೆಯ ಶವಾಗಾರ ಮತ್ತು ಆಸ್ಪತ್ರೆ ನಡುವಿನ ರಸ್ತೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಆವರಣವನ್ನು ವಿಸ್ತರಿಸಿ ಆಸ್ಪತ್ರೆಯನ್ನು ಇನ್ನಷ್ಟು ಸುಸಜ್ಜಿತ ಸೌಕರ್ಯಗಳೊಂದಿಗೆ ಅಭಿವೃದ್ಧಿ ಪಡಿಸುವ ಚಿಂತನೆ ಹೊಂದಿರುವುದಾಗಿ ಶಾಸಕ ವೇದ ವ್ಯಾಸ ಕಾಮತ್ ತಿಳಿಸಿದ್ದಾರೆ.
ಉದ್ಘಾಟಕರಾಗಿ ಭಾಗವಹಿಸಿದ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಶುಭ ಹಾರೈಸಿ ವೆನ್ಲಾಕ್ ಆಸ್ಪತ್ರೆ,ಅಲ್ಲಿನ ರೋಗಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯದ ದೃಷ್ಟಿಯಿಂದ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಸಮನ್ವಯ ಸಮಿತಿಯ ಮೂಲಕ ಹಮ್ಮಿಕೊಂಡಿರುವ ಸಮುದಾಯ ಸಹಾಯ ಕೇಂದ್ರ, ಸಮುದಾಯ ವಾಚನಾಲಯ ಮಾದರಿ ಕಾರ್ಯಕ್ರಮ ಎಂದು ಶುಭ ಹಾರೈಸಿದರು.
ಮಂಗಳೂರು ಮಹಾನಗರ ಪಾಲಿಕೆ ಮಹಾ ಪೌರರಾದ ಪ್ರೇಮಾನಂದ ಶೆಟ್ಟಿ ದಾನಿಗಳಿಗೆ ಗೌರವಾರ್ಪಣೆ ಮಾಡಿ ಸಮುದಾಯ ವಾಚನಾಲಯ ಮುಂದಿನ ದಿನಗಳಲ್ಲಿ ಕಾರ್ಯ ನಿರ್ವಹಣೆಗೆ ಮನಪಾ ವತಿಯಿಂದ ಸಹಕಾರ ನೀಡುವುದಾಗಿ ಶುಭ ಹಾರೈಸಿದರು.
ಅತಿಥಿಗಳಾಗಿ ದ.ಕ.ಜಿ.ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್, ಮನಪಾ ಆಯುಕ್ತ ಅಕ್ಷಯ್ ಶ್ರೀಧರ್ , ಮಂಗಳೂರು ವಿಶ್ವ ವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯ ರೈ, ಶ್ರೀ ಅನಘ ರಿಫೈನರೀಸ್ ಪ್ರೈವೇ ಟ್ .ಲಿ.ನ ಆಡಳಿತ ನಿರ್ದೇಶಕ ಸಾಂಬ ಶಿವರಾವ್, ಕೆಐಒಸಿಎಲ್ (ಎಚ್ .ಆರ್ &ಕೊ ಆರ್ಡಿನೇಶನ್ ) ಹಿರಿಯ ಪ್ರಬಂಧಕ ಮುರುಗೇಶ್, ಮಹಾರಾಷ್ಟ್ರ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರೋನ್ಸ್ ಬಂಟ್ವಾಳ, ಮನಪಾ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಮತ್ತು ಸಮುದಾಯ ವಾಚನಾಲಯ ಮಂಗಳೂರು. ದ.ಕ.ಜಿಲ್ಲೆಯ ಸಮನ್ವಯ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕರು ಮತ್ತು ವೆನ್ಲಾಕ್ ಅಧೀಕ್ಷಕ ಡಾ.ಸದಾಶಿವ ಸ್ವಾಗತಿಸಿದರು. ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ದ.ಕ ಜಿಲ್ಲೆಯ ಸಭಾಪತಿ ಶಾಂತರಾ ಮ ಶೆಟ್ಟಿ ವಂದಿಸಿದರು. ಹಿರಿಯ ವೈದ್ಯರಾದ ಡಾ.ಕೆ.ಆರ್ .ಕಾಮತ್ ಸಮುದಾಯ ವಾಚನಾಲಯದ ರೂಪುಗೊಂಡ ಬಗ್ಗೆ ವಿವರಿಸಿದರು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮನ್ವಯ ಸಮಿತಿ ಯ ಸದಸ್ಯ ಭಾಸ್ಕರ ರೈ ಕಟ್ಟ, ಪುಷ್ಷರಾಜ್ ಬಿ.ಎನ್ ಕಾರ್ಯಕ್ರಮ ನಿರೂಪಿಸಿದರು.