ಕೊಡಗಿನ ಶಾಸಕರು ಕೇವಲ ಭಾವನಾತ್ಮಕ ವಿಚಾರಗಳಲ್ಲಿಯೇ ರಾಜಕೀಯ ಮಾಡುತ್ತಿದ್ದಾರೆ: ಕೊಡಗು ಯೂತ್ ಕಮಿಟಿ

Prasthutha|

ಮಡಿಕೇರಿ: ಕೊಡಗಿನ ಬಿಜೆಪಿ ಶಾಸಕರು ಕೇವಲ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ರಾಜಕೀಯ ಮಾಡುತ್ತಿದ್ದಾರೆಂದು ಕೊಡಗು ಯೂತ್ ಕಮಿಟಿ ಆರೋಪಿಸಿದೆ.

- Advertisement -

ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಯೂತ್ ಕಮಿಟಿಯ ನಿಯಾಜ್, ಇತ್ತೀಚೆಗೆ ಕೊಡಗಿನಲ್ಲಿ ಸಿದ್ದರಾಮಯ್ಯನವರ ವಿರುದ್ಧ ನಡೆದ ಘಟನೆಗಳನ್ನು ಖಂಡಿಸಿದರು. ಸಿದ್ದರಾಮಯ್ಯ ಸ್ಥಾನದಲ್ಲಿ ಯಾರೇ ಆಗಿದ್ದರೂ ಅದನ್ನು ಖಂಡಿಸುತ್ತೇವೆ. ಕೊಡಗಿನ ಜನರು ಫೀಲ್ಡ್ ಮಾರ್ಷಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಜಿಲ್ಲೆಯವರೆಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತೇವೆ ಹೊರತು ಇಂತಹ ಕುಕ್ರೃತ್ಯ ಮಾಡಿದವರ ಹೆಸರಿಂದಲ್ಲ. ಕೊಡಗು ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದ್ದು, ಇಂತಹ ಘಟನೆಗಳು ಜಿಲ್ಲೆಗೆ ಕಪ್ಪು ಚುಕ್ಕೆ, ರಾಜ್ಯ ಮಟ್ಟದಲ್ಲೂ ರಾಷ್ಟ್ರ ಮಟ್ಟದಲ್ಲೂ ಕೊಡಗಿನ ಹೆಸರು ಹಾಳಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಕೊಡಗಿನ ಶಾಸಕರು ಕೇವಲ ಭಾವನಾತ್ಮಕ ವಿಚಾರಗಳನ್ನು ಇಟ್ಟು ರಾಜಕೀಯ ಮಾಡುತ್ತಿದ್ದಾರೆ, ರಾಜ್ಯ ಸರ್ಕಾರದಲ್ಲಿ ಇವರುಗಳಿಗೆ ಯಾವುದೇ ಗೌರವವಿಲ್ಲ. ಇತ್ತೀಚೆಗೆ ಕೊಡಗಿ ಶಾಸಕರನ್ನು ಹಾಗೂ ಸಂಸದರನ್ನು ಮುಖ್ಯಮಂತ್ರಿಗಳು ನಡೆಸುಕೊಂಡ ರೀತಿ ಉತ್ತಮ‌ ಉದಾಹರಣೆಯಾಗಿದೆ‌. ಕೊಡಗು ಜಿಲ್ಲೆಗೆ ಅನುದಾನ ನೀಡದಿದ್ದರೂ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟು ಮತ ಪಡೆಯುತ್ತಾರೆ ಮುಖ್ಯಮಂತ್ರಿಗಳಿಗೂ ತಿಳಿದಿದೆ ಎಂದು ಆರೋಪಿಸಿದರು.

- Advertisement -

ಕಾಕೋಟುಪರಂಬುವಿನಲ್ಲಿ ಧರ್ಮಗುರುಗಳ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದರು. ಇದೇ ಸ್ಥಾನದಲ್ಲಿ ಅನ್ಯ ಧರ್ಮದವರ ಧರ್ಮ ಗುರುಗಳ ಮೇಲೆ ಹಲ್ಲೆ ನಡೆದಿದ್ದರೆ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇತ್ತು ಎಂದರು.

ಜಿಲ್ಲೆಯಲ್ಲಿ ಟಿಪ್ಪುವಿನ ವಿಷಯಕ್ಕೆ ತಾರ್ಕಿಕ ಅಂತ್ಯ ಹಾಡಬೇಕಾಗಿದೆ. ಶಾಸಕರುಗಳು ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಪ್ರಶ್ನೆಗೆ ಟಿಪ್ಪುವನ್ನೆ ಉತ್ತರವಾಗಿ ಕೊಡುತ್ತಿದ್ದಾರೆ. ಟಿಪ್ಪು ಬಿಟ್ಟರೆ ಇವರಿಗೆ ಬೇರೆ ವಿಷಯವಿಲ್ಲ. ಈ ಒಂದು ವಿಷಯವನ್ನು ಇಟ್ಟುಕೊಂಡು ಇವರು ಇನ್ನೆಷ್ಟು ವರ್ಷ ಜಿಲ್ಲೆಯಲ್ಲಿ ರಾಜಕಾರಣ ಮಾಡುತ್ತಾರೆ ಎಂದು ಪ್ರಶ್ನಿಸಿದ ಅವರು, ಕೊಡಗಿನ ಪ್ರಬುದ್ಧ ಜನತೆ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜೈನುಲ್ ಆಬಿದ್ ಮಡಿಕೇರಿ, ಶಕೀಲ್ ವಿರಾಜೇಟೆ, ನಿಚ್ಚು ಮೂರ್ನಾಡು ಮತ್ತು ಕಲಂದರ್ ಮಡಿಕೇರಿ ಇದ್ದರು.



Join Whatsapp