ಬೀಚ್ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ನೂಕುನುಗ್ಗಲು, ಲಾಠಿಚಾರ್ಜ್: 50 ಜನರ ವಿರುದ್ಧ ಎಫ್ ಐಆರ್

Prasthutha|

ಕಲ್ಲಿಕೋಟೆ: ಕೇರಳದ ಬೀಚ್ ನಲ್ಲಿ ನಡೆದ ಸಂಗೀತ ಸಂಜೆಯ ಕಾರ್ಯಕ್ರಮದಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ 50 ಜನರ ಮೇಲೆ ಮೊಕದ್ದಮೆ ಹೂಡಲಾಗಿದ್ದು, ಒಬ್ಬನನ್ನು ಬಂಧಿಸಲಾಗಿದೆ. ಸಂಗೀತ ಸಂಜೆಯ ಸುತ್ತ ಬ್ಯಾರಿ ಕೇಡ್ ಇಡಲಾಗಿತ್ತಾದರೂ ಅತಿಯಾದ ಜನರ ನೂಕು ನುಗ್ಗಲಿನಿಂದಾಗಿ ಯಾರನ್ನೂ ಹತೋಟಿಗೆ ತರಲಾಗದ ಸ್ಥಿತಿ ಉಂಟಾಗಿತ್ತು.

- Advertisement -

ಕುಳಿತುಕೊಳ್ಳಲು ಸ್ಥಳ ಸಿಗದವರು ಗೊಂದಲ ಉಂಟು ಮಾಡುವುದರಲ್ಲಿ ತೊಡಗಿದ್ದರು. ಅವರನ್ನು ತಡೆಯಲು ಹೋದ ಪೊಲೀಸರ ಮೇಲೂ ಹಲ್ಲೆ ಮಾಡಲು ಬಂದಿದ್ದಾರೆ. ಬ್ಯಾರಿಕೇಡ್ ಗಳನ್ನು ದೂಡಿ ಹಾಕಿದ್ದಾರೆ ಎನ್ನಲಾಗಿದೆ.

ಗಲಾಟೆ ಮಿತಿ ಮೀರುವುದನ್ನು ಕಂಡ ಪೊಲೀಸರು ಸಂಗೀತ ಸಂಜೆ ನಿಲ್ಲಿಸಲು ಮುಂದಾಗಿದ್ದಾರೆ. ಆಗ ಕೆಲವರು ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದಾರೆ. ಪೊಲೀಸರತ್ತ ಕಲ್ಲು ತೂರಿದರು ಮತ್ತು ಬಾಟಲಿ ಎಸೆದರು ಎಂದು ವೆಲ್ಲಾಯಿಲ್ ಪೊಲೀಸ್ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

- Advertisement -

6 ಮಂದಿ ಪೊಲೀಸರು ಮತ್ತು 30 ಮಂದಿ ಸಾರ್ವಜನಿಕರು ಘಟನೆಯಿಂದ ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಹೆಚ್ಚುವರಿ ಪೊಲೀಸರನ್ನು ಕರೆಸಬೇಕಾಯಿತು ಎಂದು ಅವರು ತಿಳಿಸಿದರು.

ಪೊಲೀಸರ ಮೇಲೆ ಹಲ್ಲೆ ಹಾಗೂ ಪೊಲೀಸರನ್ನು ಕರ್ತವ್ಯ ನಿರ್ವಹಿಸಲು ಅಡ್ಡಿ ಪಡಿಸಿದ ಆರೋಪದಲ್ಲಿ 50 ಜನರ ಮೇಲೆ   ಎಫ್ ಐಆರ್ ದಾಖಲಿಸಲಾಗಿದೆ. ಅವರಲ್ಲಿ ಒಬ್ಬನನ್ನು ಬಂಧಿಸಲಾಗಿದೆ.

ಕಾರ್ಯಕ್ರಮವನ್ನು ಆಯೋಜಿಸಿದ್ದ ಜೆಡಿಟಿ ಕಾಲೇಜು ಉಪಶಮನಕಾರಿ ಕೇರ್ ಕೇಂದ್ರದ ಮೇಲೆ ಸಹ ಮೊಕದ್ದಮೆ ಹೂಡಲಾಗಿದೆ. ಸರಿಯಾದ ಅನುಮತಿ ಪಡೆಯದೆ, ಸರಿಯಾದ ವ್ಯವಸ್ಥೆ ಮಾಡದೆ ಕಾರ್ಯಕ್ರಮ ಆಯೋಜಿಸಿದ್ದರು ಎಂದು ಅವರ ಮೇಲೆ ಮೊಕದ್ದಮೆ ಹೂಡಲಾಗಿದೆ.

ಗಾಲಿ ಕುರ್ಚಿಗಳನ್ನು ಖರೀದಿಸುವ ಧರ್ಮ ಕಾರ್ಯಕ್ಕಾಗಿ ಹಣ ಸಂಗ್ರಹಿಸಲು ಕಾಲೇಜು ವಿದ್ಯಾರ್ಥಿಗಳಿಂದ ಮನೋರಂಜನೆ ಮತ್ತು ಕೆಲವು ಸಂಬಂಧಿತ ಸ್ಟಾಲ್ ಗಳಿಗಾಗಿ ಮಾತ್ರ ಸಂಘಟಕರು ಅನುಮತಿ ಪಡೆದಿದ್ದರು.

ಆದರೆ ಅವರ ಒಂದು ಸಂಗೀತ ಸಂಜೆಯನ್ನು ಏರ್ಪಡಿಸಿದ್ದಲ್ಲದೆ ಸಾಮಾಜಿಕ ಜಾಲ ತಾಣಗಳಲ್ಲಿ ಅದರ ಜಾಹೀರಾತು ಹಾಕಿ, ಒಂದು ಟಿಕೆಟ್ಟಿಗೆ ರೂಪಾಯಿ 150ರಂತೆ ಆನ್ ಲೈನ್ ಟಿಕೆಟ್ ಗಳನ್ನು ಸಹ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿನ್ನೆ ಭಾನುವಾರವಾದ್ದರಿಂದ ಬೀಚಿನಲ್ಲಿ ಭಾರೀ ಜನಸಂದಣಿ ಇತ್ತು. ತುಂಬ ಜನ ಆನ್ ಲೈನ್ ನಲ್ಲಿ ಟಿಕೆಟ್ ಖರೀದಿಸಿದವರೂ ಬಂದಿದ್ದರು. ಆದರೆ ಅವರಿಗೆಲ್ಲ ಆಸನ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ ಮತ್ತು ಸ್ಥಳದಲ್ಲೇ ಟಿಕೆಟ್ ಮಾರಾಟವನ್ನು ಕೂಡ ನಿಲ್ಲಿಸಲಾಯಿತು. ಅದು ಭಾರೀ ಗಲಾಟೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.



Join Whatsapp