ಮಧ್ಯಪ್ರದೇಶ: ಆಂಬ್ಯುಲೆನ್ಸ್ ಕೊರತೆಯಬಗ್ಗೆ ವರದಿ ಮಾಡಿದ ಮೂವರು ಪತ್ರಕರ್ತರ ವಿರುದ್ಧ ಎಫ್‌ಐಆರ್‌ ದಾಖಲು

Prasthutha|

ಭೋಪಾಲ್: ಆಂಬ್ಯುಲೆನ್ಸ್ ಕೊರತೆಯಬಗ್ಗೆ ವರದಿ ಮಾಡಿದ ಮೂವರು ಪತ್ರಕರ್ತರ ವಿರುದ್ಧ ಪ್ರಕರಣ ದಾಖಲಿಸಲಾದ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಆಂಬ್ಯುಲೆನ್ಸ್ ಗಳ ಕೊರತೆಯಿಂದ ಅನಾರೋಗ್ಯ ಪೀಡಿತ ತಂದೆಯನ್ನು ತಳ್ಳು ಗಾಡಿಯಲ್ಲಿ ಆಸ್ಪತ್ರೆಗೆ ಸಾಗಿಸಿದ  ವ್ಯಕ್ತಿಯ ಬಗ್ಗೆ ‘ಪತ್ರಿಕಾ’, ‘ನ್ಯೂಸ್ 18’ ಮತ್ತು ‘ಲಲ್ಲೂರಾಮ್ ಡಾಟ್ ಕಾಮ್‌’ನಲ್ಲಿ ವರದಿ ಮಾಡಲಾಗಿತ್ತು.

ಪತ್ರಕರ್ತರಾದ ಕುಂಜ್‌ಬಿಹಾರಿ ಕೌರವ್, ಅನಿಲ್ ಶರ್ಮಾ ಮತ್ತು ಎನ್‌.ಕೆ.ಭಟೆಲೆ  ಎಂಬವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420 (ವಂಚನೆ ಮತ್ತು ಅಪ್ರಾಮಾಣಿಕತೆ), 505-2 (ವರ್ಗಗಳ ನಡುವೆ ದ್ವೇಷವನ್ನು ಸೃಷ್ಟಿಸುವ ಅಥವಾ ಉತ್ತೇಜಿಸುವ ಹೇಳಿಕೆಗಳು) ಮತ್ತು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

- Advertisement -

ದಾಬೋ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜೀವ್ ಕೌರವ್ ಅವರು ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದ್ದು, ಸುಳ್ಳು ಮತ್ತು ಆಧಾರ ರಹಿತ ಸುದ್ದಿಗಳನ್ನು ಮಾಡಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.

ಭಿಂಡ್ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಎಸ್  ರಚಿಸಿದ ಕಂದಾಯ ಮತ್ತು ಆರೋಗ್ಯ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡ ತನಿಖಾ ತಂಡದ ಮಾಹಿತಿ ಪ್ರಕಾರ ‘ಆಂಬ್ಯುಲೆನ್ಸ್‌ ಸೇವೆಗಾಗಿ ವೃದ್ಧನ ಕುಟುಂಬವು ಯಾವುದೇ ಕರೆಯನ್ನು ಮಾಡಿಲ್ಲ. ವೃದ್ಧನನ್ನು ಮೊದಲು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತೇ ಹೊರತು ಸರ್ಕಾರಿ ಆಸ್ಪತ್ರೆಗಲ್ಲ’ ಎಂದು ಹೇಳಿಕೊಂಡಿದೆ.

ಆದರೆ ತನಿಖಾ ತಂಡದ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ ಹೇಳಿಕೆ ನೀಡಿರುವ ವೃದ್ಧನ ಕುಟುಂಬ ಆಂಬ್ಯುಲೆನ್ಸ್‌ ಗೆ ಕರೆ ಮಾಡಿದರೂ ಸಿಗದ ಕಾರಣ ಸುಮಾರು 5 ಕಿಲೋಮೀಟರ್ ತಳ್ಳೊ ಗಾಡಿಯನ್ನು ಬಳಸಬೇಕಾಯಿತು ಎಂದು ಜ್ಞಾನಪ್ರಸಾದ್ ವಿಶ್ವಕರ್ಮ ಅವರ ಮಕ್ಕಳಾದ ಹರಿಕೃಷ್ಣ ಮತ್ತು ಪುಷ್ಪಾ ಆರೋಪಿಸಿದ್ದಾರೆ.



Join Whatsapp