ಕರಾಚಿ: ಪಾಕಿಸ್ತಾನದ ಖ್ಯಾತ ಗಾಯಕಿ ನಯ್ಯಾರಾ ನೂರ್ (71) ಅವರು ನಿಧನರಾಗಿದ್ದಾರೆ.ಅವರು ಕೆಲ ದಿನಗಳಿಂದ ಅನಾರೋಗ್ಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.
1950ರಲ್ಲಿ ಅಸ್ಸಾಂನ ಗುವಾಹಟಿಯಲ್ಲಿ ಜನಿಸಿದ್ದ ನೂರ್ ತಮ್ಮ ಸುಮಧುರ ಕಂಠದಿಂದ ಭಾರತ–ಪಾಕಿಸ್ತಾನ ಎರಡೂ ದೇಶಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದರು. 1958ರಲ್ಲಿ ಇವರ ಕುಟುಂಬವು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್‌ಗೆ ವಲಸೆ ಹೋಗಿತ್ತು.
ನಯ್ಯಾರಾ ನೂರ್ ಅವರು 2006ರಲ್ಲಿ ‘ಬುಲ್‌ಬುಲ್–ಎ–ಪಾಕಿಸ್ತಾನ’ (ಪಾಕಿಸ್ತಾನದ ಕೋಗಿಲೆ) ಗೌರವಕ್ಕೆ ಪಾತ್ರರಾಗಿದ್ದರು.
ಶಾಸ್ತ್ರೀಯವಾಗಿ ಸಂಗೀತವನ್ನು ಅಭ್ಯಾಸ ಮಾಡಿರದ ಇವರು ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಮಾತ್ರ ಹಾಡುತ್ತಿದ್ದು, ಮುಂದೆ ಯುನಿವರ್ಸಿಟಿ ರೇಡಿಯೊದಲ್ಲಿ ಹಾಡಲು ಆರಂಭಿಸಿದರು. 1971ರಲ್ಲಿ ಮೊದಲ ಬಾರಿಗೆ ಪಾಕಿಸ್ತಾನ ಟಿವಿ ಧಾರಾವಾಹಿಗೆ ಹಾಡುವ ಮೂಲಕ ವೃತ್ತಿಜೀವನ ಆರಂಭಿಸಿದ್ದರು.