ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಏರ್ಪಡಿಸಿದ್ದ ದ್ವಿತೀಯ ಹಂತದ ಅಂಪೈರ್ ಪರೀಕ್ಷೆಗೆ ಹಾಜರಾದ 140 ಅಭ್ಯರ್ಥಿಗಳಲ್ಲಿ ಕೇವಲ ಮೂವರು ಮಾತ್ರ ಉತ್ತೀರ್ಣರಾಗಿದ್ದಾರೆ.
ಲಿಖಿತ ಪರೀಕ್ಷೆ, ನೇರ ಸಂದರ್ಶನ, ವಿಡಿಯೋ ಹಾಗೂ ದೈಹಿಕ ಪರೀಕ್ಷೆ ಸೇರಿ ಒಟ್ಟು 200 ಅಂಕಗಳನ್ನು ನಿಗದಿಪಡಿಸಲಾಗಿತ್ತು. ಇದರಲ್ಲಿ ಕನಿಷ್ಠ 90 ಅಂಕಗಳಿಸಲು 137 ಅಭ್ಯರ್ಥಿಗಳು ವಿಫಲರಾಗಿದ್ದಾರೆ. ಕೋವಿಡ್ ನಂತರ ಇದೇ ಮೊದಲ ಬಾರಿಗೆ ನಡೆಸಲಾದ ಪರೀಕ್ಷೆಯಲ್ಲಿ ದೈಹಿಕ ಪರೀಕ್ಷೆಯನ್ನು ಸೇರ್ಪಡೆ ಮಾಡಲಾಗಿತ್ತು. ಉತ್ತೀರ್ಣರಾದ ಮೂವರು ಡಿ ದರ್ಜೆಯ ಮಹಿಳಾ ಮತ್ತು ಕಿರಿಯರ ಪಂದ್ಯಗಳಲ್ಲಿ ಕಾರ್ಯ ನಿರ್ವಹಿಸಲು ಅರ್ಹತೆ ಪಡೆದುಕೊಂಡಿದ್ದಾರೆ.
ವಿಡಿಯೋ ವಿಭಾಗದಲ್ಲಿ ಪಂದ್ಯಗಳ ದೃಶ್ಯಗಳನ್ನು ತೋರಿಸಿ, ನಿರ್ದಿಷ್ಟ ಸಂದರ್ಭಗಳಲ್ಲಿ ಯಾವ ರೀತಿಯ ತೀರ್ಪುಗಳನ್ನು ನೀಡುತ್ತೀರಿ ಎಂಬ ಪ್ರಶ್ನೆಗಳನ್ನು ಕೇಳಲಾಗಿತ್ತು. ಪ್ರಾಯೋಗಿಕ ಪರೀಕ್ಷೆಯಲ್ಲಿ ಬಹುತೇಕ ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರೂ ಸಹ, ಲಿಖಿತ ಪರೀಕ್ಷೆಯಲ್ಲಿ ವಿಫಲರಾಗಿದ್ದಾರೆ. ಪರೀಕ್ಷೆಯಲ್ಲಿ ಕ್ರಿಕೆಟ್ ನಿಯಮಗಳ ಕುರಿತಾದ ಪ್ರಶ್ನೆಗಳನ್ನು ಕಡಿಮೆ ಕೇಳಲಾಗಿತ್ತು. ಬದಲಾಗಿ ಅಭ್ಯರ್ಥಿಗಳಿಗೆ ಆಟದ ಕುರಿತಾಗಿ ಇರುವ ಪ್ರಾಯೋಗಿಕ ಜ್ಞಾನ ಮತ್ತು ನಿರ್ಧಿಷ್ಟ ಸಂದರ್ಭಗಳಲ್ಲಿ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಕುರಿತಾಗಿ ಹೆಚ್ಚಿನ ಗಮನ ಹರಿಸಲಾಗಿತ್ತು ಎಂದು ಪರೀಕ್ಷೆಗಳ ಮೇಲ್ನೋಟ ವಹಿಸಿದ್ದ ಬಿಸಿಸಿಐ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಐಪಿಎಲ್ ಸೇರಿದಂತೆ ದೇಶಿಯ ಟೂರ್ನಿಗಳಲ್ಲಿ ಭಾರತೀಯ ಅಂಪೈರ್ಗಳು ಪಂದ್ಯಗಳನ್ನು ನಿರ್ವಹಿಸಿದ ಕುರಿತು ವ್ಯಾಪಕ ಟೀಕೆಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಅಂಪೈರ್ಗಳ ತೀರ್ಪಿನ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬಿಸಿಸಿಐ ಗಂಭೀರ ಚಿಂತನೆ ನಡೆಸಿತ್ತು. ಇದರ ಭಾಗವಾಗಿ ಅಂಪೈರ್ಗಳ ಆಯ್ಕೆಗಾಗಿ ನಡೆಸಲಾಗುತ್ತಿರುವ ಪರೀಕ್ಷೆಯನ್ನು ಕಠಿಣಗೊಳಿಸಲಾಗಿದೆ.