ಉಪ್ಪಿನಂಗಡಿ : ಸರಿಯಾದ ರಸ್ತೆ ಇರದ ಕಾರಣ ಅನಾರೋಗ್ಯಕ್ಕೆ ಒಳಗಾದ ವೃದ್ಧೆಯೊಬ್ಬರನ್ನು ಮರದ ಕಟ್ಟಿಗೆಗೆ ಬಟ್ಟೆಯನ್ನು ಕಟ್ಟಿ ಅದರಲ್ಲಿ ಕುಳ್ಳಿರಿಸಿ ಆಸ್ಪತ್ರೆಗೆ ಕರೆದೊಯ್ದ ಅಪರೂಪದ ಘಟನೆ ಕಡಬ ಸಮೀಪದ ನೂಜಿಬಾಳ್ತಿಲ ಗ್ರಾಮದ ಕಲ್ಲುಗುಡ್ಡೆ ಸಮೀಪದ ಬಳ್ಳಕ್ಕ ಎಂಬಲ್ಲಿ ನಡೆದಿದೆ.
ರಸ್ತೆ ಅಭಿವೃದ್ಧಿ ಆಗದ ಕಾರಣ ವಾಹನ ಓಡಾಟ ಕಷ್ಟಕರವಾಗಿದ್ದರಿಂದ ಕಾಲು ನೋವಿನಿಂದ ಬಳಲುತ್ತಿದ್ದ 70 ವರ್ಷದ ವೃದ್ಧೆಯನ್ನು ಹೀಗೆ ಆಸ್ಪತ್ರೆಗೆ ಸಾಗಿಸಬೇಕಾಗಿ ಬಂದಿದೆ.
ವೃದ್ದ ಮಹಿಳೆಯನ್ನು ಹೊತ್ತುಕೊಂಡು ಹೋಗುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ನೂಜಿಬಾಳ್ತಿಲ-ಕೊಣಾಜೆ ಗ್ರಾಮವನ್ನು ಸಂಪರ್ಕಿಸುವ ಪ್ರಮುಖ ರಸ್ತೆ ಇದಾಗಿದ್ದು, ಈ ಭಾಗದ ಜನರಿಗೆ ಎಂಜಿರ ಹತ್ತಿರದ ಪೇಟೆಯಾಗಿದೆ. ಇತ್ತೀಚೆಗೆ ಸುರಿದ ಭಾರಿ ಮಳೆಗೆ ಈ ರಸ್ತೆ ಕೆಸರುಮಯವಾದ ಕಾರಣ ಈ ಭಾಗದ ಜನ ತಮ್ಮ ವಾಹನಗಳನ್ನು ಅರ್ಧ ದಾರಿಯಲ್ಲೇ ನಿಲ್ಲಿಸಿ ಕಿ.ಮೀ ಗಟ್ಟಲೆ ನಡೆದುಕೊಂಡು ಹೋಗಿ ಮನೆ ಸೇರುವ ಪರಿಸ್ಥಿತಿ ನಿರ್ಮಾಣವಾಗಿತ್ತು