ನವದೆಹಲಿ: ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣದ 11 ಅಪರಾಧಿಗಳನ್ನು ಬಿಡುಗಡೆ ಮಾಡಿರುವ ಸರಕಾರದ ನಡೆಯನ್ನು ಅಮೆರಿಕದ ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗ (ಯುಎಸ್ ಸಿಐಆರ್ ಎಫ್) ಖಂಡಿಸಿದೆ. ಆಯೋಗದ ಉಪಾಧ್ಯಕ್ಷ ಅಬ್ರಹಾಂ ಕೂಪರ್ ಘಟನೆಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಆಯೋಗ ಮಾಡಿರುವ ಟ್ವೀಟ್ ನಲ್ಲಿ, ‘2002ರ ಗುಜರಾತ್ ಗಲಭೆಗಳ ಸಂದರ್ಭದಲ್ಲಿ ಗರ್ಭಿಣಿ ಮುಸ್ಲಿಂ ಮಹಿಳೆಯ ಮೇಲೆ ಅತ್ಯಾಚಾರ ಮಾಡಿ, ಕುಟುಂಬಸ್ಥರನ್ನು ಕೊಲೆ ಮಾಡಿದ ಆರೋಪದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ 11 ಮಂದಿಯನ್ನು ನ್ಯಾಯಸಮ್ಮತವಲ್ಲದ ರೀತಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇದನ್ನು ಯುಎಸ್ ಸಿಐಆರ್ ಎಫ್ ಖಂಡಿಸುವುದಾಗಿ ಉಪಾಧ್ಯಕ್ಷ ಅಬ್ರಹಾಂ ಕೂಪರ್ ಹೇಳಿದ್ದಾರೆ ಎಂದು ಬರೆದಿದೆ.
ಈಗಾಗಲೇ ಹಲವು ಬಾರಿ ಧಾರ್ಮಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಯುಎಸ್ಸಿಐಆರ್ಎಫ್ ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಕ್ಷೀಣಿಸಿದೆ ಎಂದು ಟೀಕಿಸಿತ್ತು. ಅಲ್ಲದೆ, ಭಾರತವನ್ನು ‘ನಿರ್ದಿಷ್ಟ ಕಳವಳದ ದೇಶ’ (ಸಿಪಿಸಿ) ಎಂದು ಹೆಸರಿಸುವಂತೆ ಅಮೆರಿಕ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.
ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಎಲ್ಲಾ 11 ಅಪರಾಧಿಗಳನ್ನು ಗುಜರಾತ್ ಸರ್ಕಾರದ ಕ್ಷಮಾಪಣೆ ನೀತಿ ಮೇರೆಗೆ ಕಳೆದ ಸೋಮವಾರ ಗೋದ್ರಾ ಉಪ ಕಾರಾಗೃಹದಿಂದ ಬಿಡುಗಡೆ ಮಾಡಲಾಗಿತ್ತು.