ರಿಯಾದ್: ಸಾರ್ವಜನಿಕ ಸ್ಥಳಗಳಲ್ಲಿ ಇತರರಿಗೆ ತೊಂದರೆಯಾಗುವಂತೆ ಗಟ್ಟಿ ಸ್ವರದಲ್ಲಿ ಮಾತನಾಡಿದರೆ ದಂಡ ವಿಧಿಸುವ ನೂತನ ಕಾನೂನನ್ನು ಸೌದಿ ಅರೇಬಿಯಾ ಹೊರತಂದಿದೆ. ಸಾರ್ವಜನಿಕ ಸ್ಥಳಗಳಲ್ಲಿ ಪಾಲಿಸಬೇಕಾದ ಶಿಸ್ತಿನಲ್ಲಿ ಶಬ್ಧ ಪಾಲನೆ ಕೂಡಾ ಒಂದಾಗಿದೆ ಎಂದು ಸೌದಿ ಅರೇಬಿಯಾ ತಿಳಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಇತರರಿಗೆ ತೊಂದರೆಯುಂಟಾಗುವ ರೀತಿಯಲ್ಲಿ ಏರುಧ್ವನಿಯಲ್ಲಿ ಮಾತನಾಡಿದರೆ 100 SR (ಸೌದಿ ರಿಯಾಲ್) ದಂಡ ವಿಧಿಸಲಾಗುವುದು ಎಂದು ಸೌದಿ ಪಬ್ಲಿಕ್ ಡೆಕೊರಮ್ ಸೊಸೈಟಿಯ ಉಪಾಧ್ಯಕ್ಷ ಖಾಲಿದ್ ಅಬ್ದುಲ್ ಕರೀಮ್ ತಿಳಿಸಿದ್ದಾರೆ.
ಶೂರಾ ಕೌನ್ಸಿಲ್, ಪರಿಣಿತರ ತಂಡ ಮೊದಲಾದ ಮಂತ್ರಿ ಮಂಡಲದ ವಿವಿಧ ಹಂತಗಳಲ್ಲಿ ಅನುಮೋದನೆಯಾದ ಬಳಿಕ ಈ ನಿಯಮವನ್ನು ಪಾಸ್ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಮಾರುಕಟ್ಟೆ ಸ್ಥಳಗಳಲ್ಲಿ ಏರು ಧ್ವನಿಯಲ್ಲಿ ಮಾತನಾಡುವುದು, ಜನರಿಗೆ ಹಾನಿ ಮಾಡುವುದು, ಅವರಿಗೆ ತೊಂದರೆ ನೀಡುವುದು ಮತ್ತು ಸಾರ್ವಜನಿಕ ಸಭ್ಯತೆಯನ್ನು ಉಲ್ಲಂಘಿಸುವ ರೀತಿಯಲ್ಲಿ ಅವರಿಗೆ ಅನಾನುಕೂಲತೆಯನ್ನು ಉಂಟುಮಾಡುವುದು ಈ ವ್ಯಾಪ್ತಿಗೆ ಸೇರಿದ್ದು, ರಾಜ್ಯದಲ್ಲಿ ಸಾಮಾಜಿಕ ಸ್ವಾಸ್ತ್ಯ ಸಂಬಂಧ ಯಾವುದೇ ಉಲ್ಲಂಘನೆಗಳ ಬಗ್ಗೆ ಆಂತರಿಕ ಸಚಿವಾಲಯದ ಸಕ್ಷಮ ಅಧಿಕಾರಿಗಳಿಗೆ ತಿಳಿಸಲು ಖಾಲಿದ್ ಅಬ್ದುಲ್ ಕರೀಮ್ ಸಾರ್ವಜನಿಕರಿಗೆ ಕರೆ ನೀಡಿದರು.
ನೂತನ ನಿಯಮಗಳ ಪ್ರಕಾರ, ಸ್ತ್ರೀ ಪುರುಷರು ಅಸಭ್ಯ ಉಡುಗೆ ತೊಡುವುದು, ಅಶ್ಲೀಲ ಭಾಷೆ ಅಥವಾ ಸನ್ನೆಗಳನ್ನು ಬಳಸುವುದು, ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವುದು, ಉಗುಳುವುದು, ಅನುಮತಿಯಿಲ್ಲದೆ ಇತರರ ಫೋಟೋ ಮತ್ತು ವೀಡಿಯೊಗಳನ್ನು ತೆಗೆಯುವುದು ಮತ್ತು ಪ್ರಾರ್ಥನಾ ಸಮಯದಲ್ಲಿ ಸಂಗೀತ ಹಾಕುವುದು ಅಪರಾಧವಾಗಿರುತ್ತದೆ. ಉಲ್ಲಂಘನೆಯಾದಲ್ಲಿ 50 SR ನಿಂದಿ 6000 SR ವರೆಗೆ ದಂಡ ವಿಧಿಸಲಾಗುತ್ತದೆ.