ಹೈದರಾಬಾದ್: ಎಐಎಂಐಎಂ ಮುಖ್ಯಸ್ಥ ಅಸದುದ್ದೀನ್ ಉವೈಸಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ನಗರ ಉಸ್ತುವಾರಿ ಸಾಯಿ ರಾಮ್ ಯಾದವ್ ಅಲಿಯಾಸ್ ಲಡ್ಡು ಯಾದವ್ ವಿರುದ್ಧ ಹೈದರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಯಾದವ್ ನೇತೃತ್ವದ ಭಗತ್ ಸಿಂಗ್ ಯುವಸೇನೆ ಆಗಸ್ಟ್ 15 ರಂದು ನಗರದ ಬೇಗಂ ಬಜಾರ್ ಪ್ರದೇಶದಲ್ಲಿ ತಿರಂಗಾ ಜಾಥಾ ಆಯೋಜಿಸಿತ್ತು. ಈ ಮಧ್ಯೆ, ಉವೈಸಿ ಅವರ ಕಾರು ಆ ಪ್ರದೇಶದ ಮೂಲಕ ಹಾದುಹೋಗುತ್ತಿದ್ದ ಸಮಯದಲ್ಲಿ, ಯಾದವ್ ಹೈದರಾಬಾದ್ ಸಂಸದರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.
ಐಪಿಸಿಯ ಸೆಕ್ಷನ್ 341,188 ಮತ್ತು 504 ರ ಅಡಿಯಲ್ಲಿ ಯಾದವ್ ವಿರುದ್ಧ ಅಫ್ಜಲ್ ಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.