ಕರಾವಳಿಯಲ್ಲಿ ಹತ್ಯೆ ಪ್ರಕರಣ: ಸೂತ್ರಧಾರರ ವಿರುದ್ಧ ಕ್ರಮಕೈಗೊಂಡರೆ ಹತ್ಯೆ ನಿಲ್ಲುತ್ತದೆ- ರಮಾನಾಥ ರೈ

Prasthutha|

ಮಂಗಳೂರು: ಕಾಂಗ್ರೆಸ್ ಪಕ್ಷವು ಸದಾ ಸಾಮರಸ್ಯ ಬಯಸುವ, ಹಿಂಸೆ ವಿರೋಧಿಸುವ ಪಕ್ಷವಾಗಿದೆ. ಪ್ರತಿ ಪಕ್ಷದ ನಾಯಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರಿಗೆ ಮೊಟ್ಟೆ ಎಸೆದಿರುವುದು ಖಂಡನೀಯ. ಬಿಜೆಪಿಯವರ ಈ ಕೃತ್ಯವನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ ಎಂದು ಮಾಜಿ ಮಂತ್ರಿ ರಮಾನಾಥ ರೈ ಹೇಳಿದ್ದಾರೆ.

- Advertisement -

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿಯಲ್ಲಿ ನಡೆದ ಹತ್ಯೆಗಳಿಗೆ ಕಾಂಗ್ರೆಸ್ ಕುಮ್ಮಕ್ಕು ಎನ್ನುತ್ತಾರೆ. ಆದರೆ ಆ ಬಗ್ಗೆ ಮಾಹಿತಿ ಹಕ್ಕಿನಡಿ ಕೇಳಿದರೂ ಕಾಂಗ್ರೆಸ್ ಪಾತ್ರ ಕಾಣಸಿಗದು. ಈ ಹತ್ಯೆಗಳಲ್ಲಿ ಮುಖ್ಯವಾಗಿ ಬಿಜೆಪಿಯವರು ಇದ್ದಾರೆ. ಎರಡನೆಯ ಸ್ಥಾನದಲ್ಲಿ ಎಸ್ ಡಿಪಿಐ ಜನ ಇದ್ದಾರೆ. ಅಧಿಕಾರಿ ಅಲೋಕ್ ಕುಮಾರ್ ಆರೋಪಿಗಳ ಆಸ್ತಿ ಮುಟ್ಟುಗೋಲು ಎನ್ನುವುದು ಸರಿಯಲ್ಲ. ಯಾರು ಇದರ ಹಿಂದೆ ಇರುವ ಸೂತ್ರಧಾರರು ಇದ್ದಾರೋ ಅವರೇ ಕುಮ್ಮಕ್ಕು ನೀಡುವವರು. ಅವರನ್ನು ಶಿಕ್ಷಿಸಿದರೆ ಈ ಹತ್ಯೆಗಳು ನಿಲ್ಲುತ್ತವೆ ಎಂದು ರೈ ಹೇಳಿದರು.

ಬಿಜೆಪಿಯವರಿಗೆ ಮುಸ್ಲಿಮ್ ಕೊಲೆಯಿಂದ ಓಟು ಬರುವುದಿಲ್ಲ. ಹಿಂದೂಗಳ ಅದರಲ್ಲೂ ಬಿಲ್ಲವ ಯುವಕರ ಕೊಲೆ ಆಗಬೇಕು. ಅದರ ಸೂತ್ರಧಾರರು ಯಾರು? ಗಲಾಟೆಯಿಂದ ಕಾಂಗ್ರೆಸ್ ಗೆ ಲಾಭ ಇಲ್ಲ. ಗಲಾಟೆ ಮೂಲಕ ಬಿಜೆಪಿ ಲಾಭ ಕಾಣಲು ಪ್ರಯತ್ನ ಮಾಡುತ್ತಿದೆ. ಜೀವನಾವಶ್ಯಕ ವಸ್ತುಗಳ ಬೆಲೆಯೇರಿಕೆಯಿಂದ ಜನರ ಗಮನ ಬೇರೆಡೆಗೆ ತಿರುಗಿಸಲು ಬಿಜೆಪಿ ಈ ಕೃತ್ಯ ನಡೆಸುತ್ತದೆ. ಗಾಂಧಿಯವರ ಅಹಿಂಸಾ ಸೂತ್ರ ನಮ್ಮದು. ಶಾಂತಿ ಅಹಿಂಸೆಯ ಸುಂದರ ಸಮಾಜ ನಿರ್ಮಾಣ ಆಗಲಿ ಎಂದು ರೈ ತಿಳಿಸಿದರು.

- Advertisement -

ಸ್ವಾತಂತ್ರ್ಯ ದಿನದ ಬಾವುಟ ಹಾರಿಸುವಾಗ ಬಂಟ್ವಾಳದಲ್ಲಿ ಕಾಲ ಬಳಿ ಅಂಬೇಡ್ಕರ್ ಮತ್ತು ಗಾಂಧಿಯವರ ಫೋಟೋ ಇಡಲಾಗಿತ್ತು. ಬಿಜೆಪಿ ನಾಯಕರು ಅದಕ್ಕಿಂತ ಮೇಲೆ ಕುಳಿತಿದ್ದರು. ಅದನ್ನು ಖಂಡಿಸುವುದಾಗಿ ರೈ ತಿಳಿಸಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿ, ಸಿದ್ದರಾಮಯ್ಯನವರ ಮೇಲೆ ಮೊಟ್ಟೆ ಎಸೆದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಕೇವಲ ಬಾಯಲ್ಲಿ ಕಾನೂನು ಜಾರಿ ಬೇಡ ಎಂದರು.

ಮಂಜುನಾಥ ಭಂಡಾರಿ ಮಾತನಾಡಿ, ಶಿವಮೊಗ್ಗದಲ್ಲಿ ಮುಸ್ಲಿಂ ಹಮೀದ್ ವೃತ್ತದಲ್ಲಿ ಸಾವರ್ಕರ್ ಬ್ಯಾನರ್ ಹಾಕಿ ಪ್ರಚೋದಿಸಿದ್ದಾರೆ. ಆರೋಪಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಇಬ್ರಾಹಿಂ ಕೋಡಿಜಾಲ್, ಶಾಲೆಟ್ ಪಿಂಟೋ, ನವೀನ್ ಡಿಸೋಜಾ, ಶಶಿಧರ ಹೆಗ್ಡೆ, ಪ್ರಕಾಶ್ ಸಾಲಿಯಾನ್, ಹರಿನಾಥ್ ಮೊದಲಾದವರು ಉಪಸ್ಥಿತರಿದ್ದರು.



Join Whatsapp