ಕೊಲಂಬೊ: ಶ್ರೀಲಂಕಾದಿಂದ ಪಲಾಯನಗೈದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರು ಪತ್ನಿ ಮತ್ತು ಮಗನೊಂದಿಗೆ ಅಮೆರಿಕದಲ್ಲಿ ನೆಲೆಸಲು ಯುಎಸ್ ಗ್ರೀನ್ ಕಾರ್ಡ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ರಾಜಪಕ್ಸೆ ಅವರ ಪತ್ನಿ ಲೋಮಾ ರಾಜಪಕ್ಸೆ ಯುಎಸ್ ಪ್ರಜೆಯಾಗಿದ್ದು, ಅರ್ಜಿ ಸಲ್ಲಿಸಲು ಅರ್ಹರಾಗಿರುವುದರಿಂದ ಗ್ರೀನ್ ಕಾರ್ಡ್ ಪಡೆಯಲು ಅವರ ವಕೀಲರು ಕಳೆದ ತಿಂಗಳು ಅರ್ಜಿ ಸಲ್ಲಿಸಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದಾರೆ ಎಂದು ಉನ್ನತ ಮೂಲಗಳನ್ನು ಹೇಳಿದೆ.
2019 ರಲ್ಲಿ, ರಾಜಪಕ್ಸೆ ಅವರು 2019 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸಲು ತಮ್ಮ ಯುಎಸ್ ಪೌರತ್ವವನ್ನು ತ್ಯಜಿಸಿದ್ದರು. ಶ್ರೀಲಂಕಾ ಸೇನೆಯಲ್ಲಿದ್ದ ರಾಜಪಕ್ಸ ಅವರು ನಿವೃತ್ತಿ ಪಡೆದು, ಮಾಹಿತಿ ತಂತ್ರಜ್ಞಾನ ಕ್ಷೇತ್ರದತ್ತ ಮುಖ ಮಾಡಿ, 1998 ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು. ನಂತರ 2005 ರಲ್ಲಿ ಶ್ರೀಲಂಕಾಕ್ಕೆ ಮರಳಿದ್ದರು.
ಪ್ರಸ್ತುತ ಬ್ಯಾಂಕಾಕ್ ನ ಹೋಟೆಲೊಂದರಲ್ಲಿ ತಮ್ಮ ಪತ್ನಿಯೊಂದಿಗೆ ವಾಸ್ತವ್ಯ ಹೂಡಿರುವ ಮಾಜಿ ಅಧ್ಯಕ್ಷ ಆಗಸ್ಟ್ 25 ರಂದು ಶ್ರೀಲಂಕಾಕ್ಕೆ ಮರಳಲಿದ್ದಾರೆ, ಕನಿಷ್ಠ ನವೆಂಬರ್ ವರೆಗೆ ಥೈಲ್ಯಾಂಡ್ ನಲ್ಲಿ ಉಳಿಯುವ ಅವರ ಆರಂಭಿಕ ಯೋಜನೆಯನ್ನು ರದ್ದುಗೊಳಿಸಿದ್ದಾರೆ ಎಂದು ವರದಿ ತಿಳಿಸಿದೆ.