ನಮ್ಮ ಕಾರ್ಯಕರ್ತರು ಬೀದಿಗಿಳಿದರೆ ನಿಮಗೆ ಮನೆಯಿಂದ ಹೊರಗೆ ಕಾಲಿಡಲೂ ಸಾಧ್ಯವಿಲ್ಲವೆಂದ ಸಿದ್ದು
ಬೆಂಗಳೂರು; ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿನ ಮೇಲೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಮೊಟ್ಟೆ ಎಸೆದರ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ತನ್ನ ಫೇಸ್ಬುಕ್ ಪೋಸ್ಟ್ ಮೂಲಕ ಮುಖ್ಯಮಂತ್ರಿ ಬೊಮ್ಮಾಯಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ತನ್ನ ಫೇಸ್ಬುಕ್ ಪೇಜ್ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ, ಮೊಟ್ಟೆ ಎಸೆಯುವ ಗೂಂಡಾಗಿರಿಯ ರಾಜಕೀಯ ಶುರುಮಾಡಬೇಡಿ. ಅದನ್ನು ಅಂತ್ಯ ಮಾಡುವುದು ಹೇಗೆ ಎಂದು ನಮಗೂ ಗೊತ್ತು. ನಮ್ಮ ಕಾರ್ಯಕರ್ತರು ನಿಮ್ಮವರಂತೆಯೇ ಬೀದಿಗಿಳಿದರೆ ನೀವು ಮನೆಯಿಂದ ಹೊರಬರುವುದು ಕೂಡಾ ಕಷ್ಟವಾಗಬಹುದು. ಯು.ಪಿ ಮಾದರಿ ಎಂದರೆ ಇದೆನಾ? ಎಂದು ಪ್ರಶ್ನಿಸಿದ್ದಾರೆ.
ನಾವು ಸಮಾಜದಲ್ಲಿ ಸಾಮರಸ್ಯ ಬಯಸುವವರು, ಎಲ್ಲ ಜಾತಿ ಧರ್ಮದ ಜನರು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು ಎಂದು ಬಯಸುವವರು. ಬಿಜೆಪಿಯವರು ಮತ ಧ್ರುವಿಕರಣಕ್ಕಾಗಿ ಸಮಾಜ ಒಡೆಯುವವರು, ಗೋಡ್ಸೆಗೆ ಪೂಜೆ ಮಾಡುವುದು ದೇಶಪ್ರೇಮವೇ? ಎಂದು ಸಿದ್ದರಾಮಯ್ಯ ಕೇಳಿದರು.
ಶಿವಮೊಗ್ಗದ ಗಲಭೆಗೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪನವರೇ ಕಾರಣ. ಸಚಿವ ಸ್ಥಾನ ಕಳೆದುಕೊಂಡು ಮನೆಯಲ್ಲಿರುವ ಅವರಿಗೆ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನ ಖಾತರಿಯೂ ಇಲ್ಲ. ಇದರಿಂದ ಹತಾಶರಾಗಿರುವ ಈಶ್ವರಪ್ಪನವರು ಆರ್ ಎಸ್ ಎಸ್ ಒಡೆಯರನ್ನು ಒಲಿಸಿಕೊಳ್ಳಲು ಇದೆಲ್ಲ ಮಾಡುತ್ತಿದ್ದಾರೆ.
ಸಾಧನೆಯ ಬಲದಿಂದ ಚುನಾವಣೆಯನ್ನು ಎದುರಿಸಲಿಕ್ಕಾಗದ ಬಿಜೆಪಿ ನಾಯಕರಿಗೆ ಸುಳ್ಳು ಸುದ್ದಿ ಮತ್ತು ಆಧಾರರಹಿತ ಆರೋಪಗಳೇ ಬಂಡವಾಳ. ಹಳೆಯ ಆಟವನ್ನು ಬಿಜೆಪಿ ರಾಜ್ಯದಲ್ಲಿ ಮತ್ತೆ ಶುರುಮಾಡಿದೆ. ಈ ಸುಳ್ಳಿನ ಸರದಾರರಿಗೆ ಸತ್ಯವನ್ನು ಎದುರಿಸುವ ನೈತಿಕತೆ ಇಲ್ಲ ಎಂದು ಹೇಳಿದರು.
ವಿ.ಡಿ.ಸಾವರ್ಕರ್ ಬಗ್ಗೆ ಅಭಿಮಾನ ಇದ್ದರೆ ಅವರ ಬಗ್ಗೆ ಪುಸ್ತಕ ಬರೆದು, ಕಾರ್ಯಕ್ರಮಗಳನ್ನು ಆಯೋಜಿಸಿ ಅವರ ವಿರುದ್ಧದ ಆರೋಪಗಳಿಗೆ ಉತ್ತರ ಕೊಡಿ. ಕೋಮುಗಲಭೆ ಹುಟ್ಟುಹಾಕಲು ಅವರ ಪೋಟೊವನ್ನು ಅಸ್ತ್ರವನ್ನಾಗಿ ಯಾಕೆ ಮಾಡುತ್ತಿದ್ದೀರಿ? ಇದನ್ನೇ ನಾನು ಪ್ರಶ್ನಿಸಿದ್ದು.
ಮಹಾತ್ಮ ಗಾಂಧೀಜಿಯವರ ಪೋಟೊ ಹಾಕಿ ಜಾಹೀರಾತು ಕೊಡುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು, ಗಾಂಧೀಜಿ ಹತ್ಯೆ ಮಾಡಿದ ನಾಥುರಾಮ್ ಗೋಡ್ಸೆ ಪೋಟೊ ಮೆರವಣಿಗ ಮಾಡಿದ ತಮ್ಮದೇ ಪಕ್ಷದ ಕಾರ್ಯಕರ್ತರ ವಿರುದ್ಧ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ?
ಸಾವರ್ಕರ್ ಅವರನ್ನು ಹೊತ್ತು ಮೆರೆಯುತ್ತಿರುವ ಬಿಜೆಪಿ ನಾಯಕರಲ್ಲಿ ಯಾರಾದರೂ 52 ವರ್ಷಗಳ ಕಾಲ ಆರ್ ಎಸ್ ಎಸ್ ಕಚೇರಿ ಮೇಲೆ ರಾಷ್ಟ್ರಧ್ವಜವನ್ನು ಯಾಕೆ ಹಾರಿಸಿರಲಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸುತ್ತೀರಾ? ಎಂದು ಸವಾಲು ಹಾಕಿದ್ದಾರೆ.
ಬಾಬಾಸಾಹೇಬ್ ಅಂಬೇಡ್ಕರ್ ಅವರ ಪೋಟೊವನ್ನು ಪಕ್ಷದ ಕಚೇರಿಯಲ್ಲಿಯೇ ಕಸದ ಬುಟ್ಟಿಗೆ ಎಸೆದಿರುವ ಬಿಜೆಪಿ ನಾಯಕರ ಹೃದಯದೊಳಗೆ ಗಾಂಧೀಜಿಯೂ ಇಲ್ಲ, ಅಂಬೇಡ್ಕರ್ ಅವರೂ ಇಲ್ಲ. ಅವರೊಳಗೆ ಇರುವುದು ನಾಥುರಾಮ್ ಗೋಡ್ಸೆ ಮಾತ್ರ. ಈ ಸತ್ಯವನ್ನು ಮೊದಲು ಒಪ್ಪಿಕೊಳ್ಳಿ.
ಬಿ.ಎಸ್ ಯಡಿಯೂರಪ್ಪ ಅವರಿಗೆ 75 ವರ್ಷ ಆಯ್ತು ಎಂದು ಮುಖ್ಯಮಂತ್ರಿ ಸ್ಥಾನದಿಂದ ನಿರ್ದಯವಾಗಿ ಕೆಳಗಿಳಿಸಿದರು. ಅವರು ಕಣ್ಣೀರು ಹಾಕುತ್ತಾ ರಾಜೀನಾಮೆ ನೀಡಿದ್ದರು. ಈಗ ಮತ್ತೆ ಸಂಸದೀಯ ಮಂಡಳಿಗೆ ಆಯ್ಕೆ ಮಾಡಿದ್ದಾರೆ, ಅವರ ವಯಸ್ಸು ಕಡಿಮೆ ಆಯ್ತಾ? ಇದಕ್ಕೆ ಕಾರಣ ಅವರ ಮೇಲಿನ ಪ್ರೀತಿ ಅಲ್ಲ, ಸೋಲಿನ ಭಯ ಎಂದು ಹೇಳಿದರು.