ಜಿಂಬಾಬ್ವೆ ವಿರುದ್ಧ ಟೀಮ್‌ ಇಂಡಿಯಾಗೆ ದಾಖಲೆಯ 10 ವಿಕೆಟ್ ಜಯ

Prasthutha|

ಹರಾರೆ; ಜಿಂಬಾಬ್ವೆ ವಿರುದ್ಧದ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಏಕದಿನ ಕ್ರಿಕೆಟ್‌ ಚರಿತ್ರೆಯಲ್ಲೇ ಇದೇ ಮೊದಲ ಬಾರಿಗೆ ಟೀಮ್‌ ಇಂಡಿಯಾ, ಕ್ಯಾಲೆಂಡರ್‌ ವರ್ಷವೊಂದರಲ್ಲಿ ಎರಡನೇ ಬಾರಿಗೆ 10 ವಿಕೆಟ್‌ ಅಂತರದಲ್ಲಿ ಗೆಲುವಿನ ಸಂಭ್ರಮ ಆಚರಿಸಿದೆ.

- Advertisement -

ಹರಾರೆ ಸ್ಪೋರ್ಟ್ಸ್‌ ಕ್ಲಬ್‌ನಲ್ಲಿ ನಡೆದ ಪಂದ್ಯದಲ್ಲಿ ಭಾರತ  190 ರನ್‌ಗಳ ಗೆಲುವಿನ ಗುರಿ ಪಡೆದಿತ್ತು. ಸುಲಭ ಗುರಿಯನ್ನು ಯಾವುದೇ ವಿಕೆಟ್‌ ಕಳೆದುಕೊಳ್ಳದೆ 30.5 ಓವರ್‌ಗಳಲ್ಲಿ ಬೆನ್ನತ್ತಿದ್ದ ಟೀಮ್‌ ಇಂಡಿಯಾ, ಮೂರು ಪಂದ್ಯಗಳ ಸರಣಿಯಲ್ಲಿ ಗೆಲುವಿನ ಆರಂಭ ಪಡೆದಿದೆ.

ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದ ಶಿಖರ್‌ ಧವನ್‌ ಮತ್ತು ಶುಭ್‌ಮನ್‌ ಗಿಲ್‌ ಅಜೇಯರಾಗಿ ತಂಡವನ್ನು ಗೆಲುವಿನ ದಡ ಸೇರಿಸಿದರು. 113 ಎಸೆತಗಳನ್ನು ಎದುರಿಸಿದ ಧವನ್‌, 9 ಬೌಂಡರಿಗಳ ನೆರವಿನೊಂದಿಗೆ 81 ರನ್‌ಗಳಿಸಿದರು. ಮತ್ತೊಂದೆಡೆ ಧವನ್‌ಗೆ ತಕ್ಕ ಸಾಥ್‌ ನೀಡಿದ ಗಿಲ್‌ 82 ರನ್‌ ಗಳಿಸಿದರು. 72 ಎಸೆತಗಳ ಗಿಲ್‌ ಇನ್ನಿಂಗ್ಸ್‌ 10 ಬೌಂಡರಿ ಮತ್ತು ಒಂದು ಸಿಕ್ಸರ್‌ ಒಳಗೊಂಡಿತ್ತು.

- Advertisement -

ಇದಕ್ಕೂ ಮೊದಲು ಟಾಸ್‌ ಸೋತು ಬ್ಯಾಟಿಂಗ್‌ ಮಾಡಿದ್ದ ಜಿಂಬಾಬ್ವೆ, ಭಾರತದ ಬಿಗು ಬೌಲಿಂಗ್‌ ದಾಳಿ ಎದುರು ಪರದಾಡಿ 40.3 ಓವರ್‌ಗಳಲ್ಲಿ ಸರ್ವಪತನ ಕಂಡಿತ್ತು. ನಾಯಕ ರೇಜಿಸ್‌ ಚಕಬ್ವಾ  35 ರನ್‌, ಬ್ರಾಂಡ್‌ ಇವಾನ್ಸ್‌  33 ಹಾಗೂ ರಿಚಾರ್ಡ್‌ ಎನ್‌ಗರವಾ 34 ರನ್‌ ಗಳಿಸಿದರು. ಭಾರತದ ಪರ ದೀಪಕ್‌ ಚಾಹರ್‌, ಪ್ರಸಿದ್ಧ್‌ ಕೃಷ್ಣ ಹಾಗೂ ಅಕ್ಷರ್‌ ಪಟೇಲ್‌ ತಲಾ ಮೂರು ವಿಕೆಟ್‌ ಪಡೆದು ಮಿಂಚಿದರು.

ಸರಣಿಯ ಎರಡನೇ ಪಂದ್ಯ ಆಗಸ್ಟ್‌ 20, ಶನಿವಾರದಂದು ಇದೇ ಮೈದಾನದಲ್ಲಿ ನಡೆಯಲಿದೆ.



Join Whatsapp