►ಗೋಡ್ಸೆಗೆ ಪೂಜೆ ಮಾಡುವವರಿಂದ ದೇಶದಲ್ಲಿ ಸಾಮರಸ್ಯ ಸ್ಥಾಪನೆ ಮಾಡಲು ಸಾಧ್ಯವೇ?
ಮಡಿಕೇರಿ: ಈ ಬಾರಿ ಕೊಡಗಿನ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಲಿದೆ, ಹೀಗಾಗಿ ಬಿಜೆಪಿಯವರು ಹತಾಶರಾಗಿ ನನಗೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತಿದ್ದಾರೆ. ನಾವು ಇವರಂತೆ ಮಾಡಲು ಹೊರಟರೆ ಮುಖ್ಯಮಂತ್ರಿಗಳಾದಿಯಾಗಿ ಯಾವ ಸಚಿವರು ತಿರುಗಾಡುವಂತೆಯೇ ಇರಲ್ಲ. ನಮ್ಮ ಕಾರ್ಯಕರ್ತರಿಗೆ ಈ ಶಕ್ತಿ ಇದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ, ಈ ಭಾಗದಲ್ಲಿ ಮಳೆಯಿಂದಾದ ಬೆಳೆ ಹಾನಿ ಬಗ್ಗೆ ಸರ್ವೇ ಮಾಡಿ, ನಷ್ಟದ ಅಂದಾಜನ್ನು ಸರ್ಕಾರ ಇನ್ನೂ ಮಾಡಿಲ್ಲ. ಕಂದಾಯ ಇಲಾಖೆ ಕಾರ್ಯದರ್ಶಿಗಳು ಈಗ ಸರ್ವೇ ನಡೆಯುತ್ತಿದೆ ಎನ್ನುತ್ತಿದ್ದಾರೆ, ಹೀಗಾಗಿ ಅವರ ಬಳಿಯೂ ಪ್ರವಾಹದಿಂದ ಪ್ರಾಣ ಕಳೆದುಕೊಂಡ ಜನ, ಜಾನುವಾರುಗಳು, ರಸ್ತೆ, ಕಟ್ಟಡಗಳಿಗೆ ಆದ ಹಾನಿ, ಬೆಳೆ ನಷ್ಟ ಮುಂತಾದ ಯಾವ ಮಾಹಿತಿಯೂ ಇಲ್ಲ. ಸುಮಾರು 35,000 ಮನೆಗಳಿಗೆ ಹಾನಿಯಾಗಿದೆ, ಸುಮಾರು 10,000 ಮನೆಗಳು ಸಂಪೂರ್ಣ ನಾಶವಾಗಿದೆ ಎಂಬ ಮಾಹಿತಿ ನನಗಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಇಂದು ಕೊಡಗು ಜಿಲ್ಲೆಯಾದ್ಯಂತ ಸಂಚಾರ ಮಾಡಿ ಮಳೆಯಿಂದಾದ ಹಾನಿ ವೀಕ್ಷಿಸಿದೆ. ಈ ಸಂದರ್ಭದಲ್ಲಿ ಸಂತ್ರಸ್ತರೊಂದಿಗೆ ಮಾತನಾಡಿ ಅವರ ಸಮಸ್ಯೆಗಳನ್ನು ಆಲಿಸಿದ್ದೇನೆ. ಜಿಲ್ಲೆಯ ಹಲವು ಕಡೆ ಮಣ್ಣು ಕುಸಿದು ಮನೆಗಳಿಗೆ ನೀರು ನುಗ್ಗಿರುವುದರಿಂದ ಮನೆಯಲ್ಲಿ ವಾಸ ಮಾಡಲು ಸಾಧ್ಯವಾಗುತ್ತಿಲ್ಲ. ಅವರೆಲ್ಲ ಬೇರೆ ಸ್ಥಳಗಳಿಗೆ ತೆರಳಿದ್ದಾರೆ. ಇಲ್ಲಿನ ನಿವಾಸಿಯಾದ ಖಾದರ್ ಎಂಬುವವರಿಗೆ 2018ರ ಪ್ರವಾಹದ ಸಂದರ್ಭದಲ್ಲಿ ಆದ ಹಾನಿಗೆ ಇನ್ನೂ ಪರಿಹಾರ ನೀಡಿಲ್ಲ ಎಂದು ಅವರ ನನ್ನ ಬಳಿ ಹೇಳಿಕೊಂಡರು. ಪಯಶ್ವಿನಿ ನದಿಗೆ ಸೇತುವೆ ನಿರ್ಮಾಣ ಮಾಡಿ ಎಂದು ಜನರು ಒತ್ತಾಯಿಸಿದರೂ ಸೇತುವೆ ಬದಲು ನದಿಗೆ ಅಡ್ಡಲಾಗಿ ವೆಂಟೆಡ್ ಡ್ಯಾಂ ನಿರ್ಮಾಣ ಮಾಡಿದ್ದಾರೆ, ಇದರಿಂದ ನೀರಿನ ಜೊತೆ ಹರಿದು ಬರುವ ಮರ, ಕಸ, ಕಲ್ಲುಗಳು ನೀರಿನ ಹರಿವಿಗೆ ಅಡ್ಡ ಆಗಿರುವುದರಿಂದ ಡ್ಯಾಂನ ಹೊರಭಾಗಕ್ಕೆ ನೀರು ಹರಿದು ಮನೆ, ರಸ್ತೆ, ಶಾಲೆಗಳಿಗೆ ಹಾನಿ ಮಾಡಿದೆ. ಕೊಯ್ನಾಡ್ ಎಂಬಲ್ಲಿ ಮಣ್ಣು ಕುಸಿದು ಶಾಲಾ ಕಟ್ಟಡ ಹಾನಿಯಾಗಿದೆ, ಮುಖ್ಯಮಂತ್ರಿಗಳು ಪ್ರವಾಸದ ಸಂದರ್ಭದಲ್ಲಿ ಅದೇ ದಾರಿಯಲ್ಲಿ ಹೋದರೂ ಹಾನಿಯಾದ ಜಾಗಕ್ಕೆ ಬೇಟಿ ನೀಡಿಲ್ಲ. ಇನ್ನೊಂದು ಕಡೆ ಸುಮಾರು 7 ಕೋಟಿ ಖರ್ಚು ಮಾಡಿ ತಡೆಗೋಡೆ ನಿರ್ಮಾಣ ಮಾಡಿದ್ದಾರೆ, ಅದು ಬಿದ್ದೋಗುತ್ತೆ ಎಂದು ಮರಳಿನ ಚೀಲಗಳನ್ನು ಅಡ್ಡ ಇಟ್ಟಿದ್ದಾರೆ ಎಂದು ಅವರು ಹೇಳಿದರು.
ಈ ಬಾರಿ ಕೊಡಗಿನ ಎರಡು ಕ್ಷೇತ್ರಗಳಲ್ಲಿ ನಾವು ಗೆಲ್ಲುತ್ತೇವೆ, ಹೀಗಾಗಿ ಬಿಜೆಪಿಯವರು ಹತಾಶರಾಗಿ ನನಗೆ ಕಪ್ಪು ಬಾವುಟ ಪ್ರದರ್ಶನ ಮಾಡುತ್ತಿದ್ದಾರೆ. ನಾವು ಇವರಂತೆ ಮಾಡಲು ಹೊರಟರೆ ಮುಖ್ಯಮಂತ್ರಿಗಳಾದಿಯಾಗಿ ಯಾವ ಸಚಿವರು ತಿರುಗಾಡುವಂತೆಯೇ ಇರಲ್ಲ. ನಮ್ಮ ಕಾರ್ಯಕರ್ತರಿಗೆ ಈ ಶಕ್ತಿ ಇದೆ. ಬಿಜೆಪಿಯವರು ದುಡ್ಡುಕೊಟ್ಟು ಜನರನ್ನು ಕರೆದುಕೊಂಡು ಬಂದು ಪ್ರತಿಭಟನೆ ಮಾಡಿಸಿದ್ದಾರೆ. ಇದು ಹೇಡಿಗಳು ಮಾಡುವ ಕೆಲಸ. ಸರ್ಕಾರ ನಡೆಸಲು ಬರಲ್ಲ ಇವರಿಗೆ. ಇಲ್ಲಿ ಸರ್ಕಾರವೇ ಸತ್ತು ಮಲಗಿದೆ, ಹೀಗಾಗಿ ಜನರ ಗಮನ ಬೇರೆಡೆಗೆ ಸೆಳೆಯಲು ಈ ರೀತಿ ಸಣ್ಣತನ ಮಾಡುತ್ತಿದ್ದಾರೆ. ಟಿಪ್ಪು ಜಯಂತಿ ಆಚರಣೆ ಮಾಡುವಾಗ ಸುಮ್ಮನಿದ್ದರು, ಕಳೆದ ನಾಲ್ಕು ವರ್ಷಗಳಲ್ಲಿ ಹಲವು ಬಾರಿ ಕೊಡಗಿಗೆ ಬಂದಿದ್ದೆ, ಆಗ ಯಾಕೆ ಪ್ರತಿಭಟನೆ ಮಾಡಿಲ್ಲ? ಇಲ್ಲಿ ಕಳಪೆ ಕಾಮಗಾರಿ ಮಾಡಿರುವುದು ನನಗೆ ಗೊತ್ತಾಗುತ್ತದೆ ಎಂದು ಪ್ರತಿಭಟನೆ ಮಾಡಿಸುತ್ತಿದ್ದಾರೆ. ಇದು 40% ಕಮಿಷನ್ ಸರ್ಕಾರ, ಹಾಗಾಗಿ ಕಳಪೆ ಕಾಮಗಾರಿಗಳು ಆಗಿವೆ. ಸರ್ಕಾರ ಮತ್ತು ಕಂಟ್ರಾಕ್ಟರ್ ಸೇರಿಕೊಂಡು 7 ಕೋಟಿ ಲೂಟಿ ಮಾಡಿದ್ದಾರೆ. ಇದನ್ನು ನಾನು ನೋಡಬಾರದು ಎಂದು ಟಾರ್ಪಲ್ ನಿಂದ ಮುಚ್ಚಿದ್ದಾರೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಭೂ ಕುಸಿತಕ್ಕೆ ಶಾಶ್ವತ ಪರಿಹಾರ ಹುಡುಕಬೇಕು. ಅದನ್ನು ಬಿಟ್ಟು ಸರ್ಕಾರ ತೇಪೆ ಹಾಕುವ ಕೆಲಸ ಮಾಡುತ್ತಿದೆ. ಜಿಲ್ಲೆಯಲ್ಲಿ ಯಾರಿಗೂ ಪರಿಹಾರ ನೀಡಿಲ್ಲ. ಇಡೀ ರಾಜ್ಯದ ಪರಿಸ್ಥಿತಿ ಹೀಗೆ ಇದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಇಲ್ಲಿನ ಜನರಿಗೆ ಕುಶಾಲನಗರದಲ್ಲಿ ಜಾಗ ನೀಡಿ ಮನೆ ಕಟ್ಟಿಕೊಟ್ಟಿದ್ದೆ. ನಮ್ಮ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಹಣ ಬಿಡುಗಡೆಯಾಗಿದ್ದು ಬಿಟ್ಟರೆ ಮತ್ತೆ ಹಣ ನೀಡಿಲ್ಲ. ವೀರಾಜಪೇಟೆ ಮತ್ತು ಮಡಿಕೇರಿ ಜನ ಬಿಜೆಪಿಯನ್ನು ಸೋಲಿಸಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ತೀರ್ಮಾನ ಮಾಡಿದ್ದಾರೆ, ಇದರಿಂದ ಬಿಜೆಪಿಯವರು ಹತಾಶರಾಗಿದ್ದಾರೆ ಎಂದು ಅವರು ಹೇಳಿದರು.
ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಕೊಡಗು ಜಿಲ್ಲೆಯಲ್ಲಿ ಅಭ್ಯರ್ಥಿಗಳು ಯಾರು ಎಂದು ನಿರ್ಧಾರ ಮಾಡುತ್ತೇವೆ. ಸ್ಥಳೀಯ ಕಾರ್ಯಕರ್ತರು ಮತ್ತು ಮುಖಂಡರ ಅಭಿಪ್ರಾಯ ಪಡೆದು, ಗೆಲ್ಲುವ ಅಭ್ಯರ್ಥಿಯನ್ನು ಚುನಾವಣೆಗೆ ನಿಲ್ಲಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಯಡಿಯೂರಪ್ಪ ಅವರಿಗೆ 75 ವರ್ಷ ಆಯ್ತು ಎಂದು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದರು, ಅವರು ವಿಧಾನಸಭೆಯಲ್ಲಿ ಕಣ್ಣೀರು ಹಾಕುತ್ತಾ ರಾಜೀನಾಮೆ ನೀಡಿದ್ದರು. ಈಗ ಮತ್ತೆ ಸಂಸದೀಯ ಮಂಡಳಿಗೆ ಆಯ್ಕೆ ಮಾಡಿದ್ದಾರಲ್ಲ, ಅವರ ವಯಸ್ಸು ಕಡಿಮೆ ಆಯ್ತಾ? ಈಗ ಯಡಿಯೂರಪ್ಪ ಅವರಿಗೆ 65 ಆಯ್ತಾ? ಚುನಾವಣೆ ಹತ್ತಿರ ಇರುವುದರಿಂದ ಅವರಿಗೆ ಅವಕಾಶ ನೀಡಿದ್ದಾರೆ, ಈಗೇನು ಮತ್ತೆ ಅವರನ್ನು ಮುಖ್ಯಮಂತ್ರಿ ಮಾಡುತ್ತಾರ? ಹೆಚ್ಚೆಂದರೆ ಯಡಿಯೂರಪ್ಪ ಅವರು ತಮ್ಮ ಮಗನಿಗೆ ಟಿಕೇಟ್ ಕೊಡಿಸಬಹುದು ಎಂದು ಸಿದ್ದರಾಮಯ್ಯ ಹೇಳಿದರು.
ಕೊಡಗಿನಲ್ಲಿ ಮಳೆಯಿಂದ ಹಾನಿಗೊಳಗಾದ ಜನರಿಗೆ ಸರ್ಕಾರ ಎಲ್ಲಿ ಪರಿಹಾರ ನೀಡಿದೆ? ಪರಿಹಾರ ಕಾಮಗಾರಿಗಳು ಕಳಪೆಯಾಗಿವೆ. ರಾಜ್ಯದ ತೆರಿಗೆ ಹಣ ಇಟ್ಟುಕೊಂಡು ಜನರಿಗೆ ಪರಿಹಾರ ನೀಡದೆ ಏನು ಮಾಡುತ್ತಿದ್ದಾರೆ? ಮುಖ್ಯಮಂತ್ರಿಗಳು ಪ್ರವಾಹದಿಂದ ಹಾನಿಗೊಳಗಾದ ಎಲ್ಲಾ 18 ಜಿಲ್ಲೆಗಳಿಗೂ ಹೋಗಿದ್ದಾರ? ಸೋಮಶೇಖರ್ ಇಲಾಖೆಯಲ್ಲಿ ಏನು ನಡೀತಿದೆ ಎಂದು ಹೋಗಿ ಮಾಧುಸ್ವಾಮಿಯನ್ನು ಕೇಳಿ. ಸೋಮಶೇಖರ್ ಸುಮ್ಮನೆ ಬಾಯಿಗೆ ಬಂದಂತೆ ಮಾತನಾಡಬಾರದು.
ಬಿಜೆಪಿಯವರು ಇಂದು ನನ್ನ ಕಾರಿನ ಮೇಲೆ ಮೊಟ್ಟೆ ಎಸೆದ್ರು ಎಂದೇ ಇಟ್ಟುಕೊಳ್ಳೋಣ, ನಮಗೆ ಅವರ ಕಾರಿನ ಮೇಲೆ ಮೊಟ್ಟೆ ಎಸೆಯೋಕೆ ಬರಲ್ವಾ? ಅಲ್ಲಿಂದಲೇ ಶುರು ಮಾಡಿಕೊಂಡು ಬಂದಿದ್ದು ನಾನು.
ಶಿವಮೊಗ್ಗದಲ್ಲಿ ನಡೆದ ಗಲಭೆಗೆ ನೇರವಾಗಿ ಈಶ್ವರಪ್ಪ ಅವರೇ ಕಾರಣ. ಅವರ ಕ್ಷೇತ್ರದಲ್ಲಿ ಗಲಾಟೆ ಆಗಿರೋದು ಹಾಗಾಗಿ ಅವರೇ ಕಾರಣ ಎಂದು ಸಿದ್ದರಾಮಯ್ಯ ಆರೋಪಿಸಿದರು.
ಮುಂದಿನ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದು ಖಚಿತ. ಎಲ್ಲಿಂದ ಎಂದು ಇನ್ನೂ ನಿರ್ಧಾರ ಮಾಡಿಲ್ಲ. ಹಲವು ಕಡೆ ಜನರು ನಮ್ಮ ಕ್ಷೇತ್ರದಿಂದ ಸ್ಪರ್ಧಿಸಿ ಎಂದು ಕರೆಯುತ್ತಿದ್ದಾರೆ. ಯೋಚನೆ ಮಾಡಿ ಈ ಬಗ್ಗೆ ನಿರ್ಧಾರ ಮಾಡುತ್ತೇನೆ. ಮುಖ್ಯಮಂತ್ರಿ ಆಯ್ಕೆ ಮಾಡುವುದು ಚುನಾಯಿತ ಶಾಸಕರು ಮತ್ತು ಅದಕ್ಕೆ ಒಪ್ಪಿಗೆ ನೀಡುವುದು ಹೈಕಮಾಂಡ್. ಚುನಾವಣೆಗೆ ಮೊದಲೇ ಮುಖ್ಯಮಂತ್ರಿ ಕುರ್ಚಿ ಮೇಲೆ ಹೋಗಿ ಕೂರೋಕಾಗುತ್ತಾ? ಎಂದು ಪ್ರಶ್ನಿಸಿದರು.
ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಬೇಕು ಎಂದು ಬಿಜೆಪಿ ಶಾಸಕರು ಹೇಳಿರುವುದು ಮೂರ್ಖತನದ ಪರಮಾವಧಿ ಹೇಳಿಕೆ. ಭಾಷಾವಾರು ಪ್ರಾಂತ್ಯ ರಚನೆ ಆಗಿ ರಾಜ್ಯಗಳ ಸ್ಥಾಪನೆ ಆದದ್ದು, ಕರ್ನಾಟಕ ಏಕೀಕರಣದ ಸಂದರ್ಭದಲ್ಲಿ ರಾಯಚೂರು ಯಾವ ರಾಜ್ಯದಲ್ಲಿತ್ತು? ಈಗ ಇಂತಹ ಹೇಳಿಕೆ ನೀಡುವವರು ಮಾನಸಿಕ ಅಸ್ವಸ್ಥರಿರಬೇಕು ಎಂದು ಹರಿಹಾಯ್ದರು.
ಬಿಜೆಪಿ ಮತ್ತು ಹಿಂದೂ ಪರ ಸಂಘಟನೆಗಳು ಮುಂದಿನ ಬಾರಿ ಗಣೇಶೋತ್ಸವದಲ್ಲಿ ಸಾವರ್ಕರ್ ಫೋಟೋ ಪ್ರತಿಷ್ಠಾಪಿಸುವ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾವು ಸಮಾಜದಲ್ಲಿ ಸಾಮರಸ್ಯ ಬಯಸುವವರು, ಎಲ್ಲ ಜಾತಿ ಧರ್ಮದ ಜನರು ಒಂದೇ ತಾಯಿಯ ಮಕ್ಕಳಂತೆ ಬದುಕಬೇಕು ಎಂದು ಬಯಸುವವರು ನಾವು. ಬಿಜೆಪಿ ಅವರು ಧರ್ಮಾಧಾರಿತ ರಾಜಕಾರಣ ಮಾಡುವವರು. ಮತ ಧ್ರುವೀಕರಣಕ್ಕಾಗಿ ಸಮಾಜ ಒಡೆಯುವವರು, ಅದಕ್ಕಾಗಿ ಈ ರೀತಿ ಮಾತನಾಡುತ್ತಾರೆ. ಗೋಡ್ಸೆಗೆ ಪೂಜೆ ಮಾಡುವವರಿಂದ ದೇಶದಲ್ಲಿ ಸಾಮರಸ್ಯ ಸ್ಥಾಪನೆ ಮಾಡಲು ಸಾಧ್ಯವೇ? ಎಂದು ಕೇಳಿದರು.
ಕೊಡಗಿನಲ್ಲಿ ಪ್ರತೀ ಬಾರಿ ಮಳೆಯಿಂದ ಭೂಕುಸಿತ ಉಂಟಾಗುತ್ತಿರುವುದರಿಂದ ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪ ಮಾಡಿ, ಶಾಶ್ವತ ಪರಿಹಾರ ರೂಪಿಸುವಂತೆ ಸರ್ಕಾರವನ್ನು ಒತ್ತಾಯ ಮಾಡುತ್ತೇನೆ. ಮಾಧುಸ್ವಾಮಿ ಅವರು ಸರ್ಕಾರ ನಡೆಯುತ್ತಿಲ್ಲ, ಕೇವಲ ಮ್ಯಾನೇಜ್ ಮಾಡುತ್ತಿದ್ದೇವೆ ಎಂದು ಹೇಳಿರುವುದು ಸತ್ಯದ ಮಾತು. ಇಲ್ಲಿ ಸರ್ಕಾರವೂ ಇಲ್ಲ, ಆಡಳಿತವೂ ಇಲ್ಲ. ರಾಜ್ಯದಲ್ಲಿ ದುರ್ಬಲ ಮುಖ್ಯಮಂತ್ರಿ ಇದ್ದಾರೆ, ಹೀಗಿದ್ದಾಗ ಆಡಳಿತ ಇರಲು ಸಾಧ್ಯವಾ? ಎಂದು ಪ್ರಶ್ನಿಸಿದರು.
ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡುವ ಸಂಬಂಧ ಮೂರು ಹಂತದ ಪರೀಕ್ಷೆಗಳು ನಡೆದು ಆ ನಂತರದ ವರದಿ ಆಧರಿಸಿ ಮೀಸಲಾತಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸರ್ಕಾರ ಭಕ್ತ ವತ್ಸಲಂ ಅವರ ಕಮಿಟಿ ರಚನೆ ಮಾಡಿತ್ತು, ಅವರು ಒಂದು ವರದಿಯನ್ನು ನೀಡಿದ್ದಾರೆ. ಈ ವರದಿಯನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಳ್ಳಬೇಕು. ಅಲ್ಲಿಯವರೆಗೆ ಮೀಸಲಾತಿ ನೀಡಲು ಬರಲ್ಲ. ಹಿಂದೆ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಮೀಸಲಾತಿ ಇಲ್ಲದೆ ಚುನಾವಣೆ ನಡೆಸಬೇಡಿ ಎಂದು ನಮ್ಮ ಅಭಿಪ್ರಾಯ ಹೇಳಿದ್ದೇವೆ. ಸಂವಿಧಾನಕ್ಕೆ 73 ಹಾಗೂ 74ನೇ ತಿದ್ದುಪಡಿ ಮಾಡಿರುವುದೇ ಮಹಿಳೆಯವರು ಮತ್ತು ಹಿಂದುಳಿದವರಿಗೆ ಮೀಸಲಾತಿ ನೀಡಲು. ಸರ್ಕಾರ ಹಿಂದುಳಿದ ವರ್ಗದ ಜನರಿಗೆ ಅನ್ಯಾಯ ಆಗದ ರೀತಿಯಲ್ಲಿ ನೋಡಿಕೊಳ್ಳಬೇಕು ಎಂದರು.
ಕೊಡಗಿನಲ್ಲಿ ಕಾಂಗ್ರೆಸ್ ಪಕ್ಷ ಅತ್ಯಂತ ಪ್ರಬಲವಾಗಿದೆ. ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳೇ ಗೆಲ್ಲುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ವಿಪಕ್ಷ ನಾಯಕ ಉತ್ತರಿಸಿದರು.