ಟೆಹರಾನ್: ಲೇಖಕ ಸಲ್ಮಾನ್ ರಶ್ದಿ ಮೇಲೆ ನಡೆದ ಮಾರಣಾಂತಿಕ ಹತ್ಯೆಯಲ್ಲಿ ಇರಾನಿನ ಪಾತ್ರ ಇಲ್ಲ ಎಂದು ಟೆಹರಾನ್ ನಿಂದ ಇರಾನ್ ಸರಕಾರದ ಅಧಿಕೃತ ಪ್ರತಿನಿಧಿಯೊಬ್ಬರು ಹೇಳಿಕೆ ನೀಡಿದ್ದಾರೆ.
ಇರಾನ್ ಸರಕಾರದ ವಿದೇಶಾಂಗ ಸಚಿವಾಲಯದ ವಕ್ತಾರ ನಾಸೆರ್ ಕನಾನಿ ಸರಕಾರದ ಪರ ಹೇಳಿಕೆ ನೀಡಿ ದಾಳಿಯಲ್ಲಿ ಇರಾನ್ ಸರಕಾರದ ಪಾತ್ರ ಇಲ್ಲ ಎಂದು ಪತ್ರಕರ್ತರಿಗೆ ಹೇಳಿಕೆ ನೀಡಿದ್ದಾರೆ.
“ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಸಲ್ಮಾನ್ ರಶ್ದಿ ಮೇಲೆ ನಡೆದ ದಾಳಿಗೆ ನಾವು ಯಾವುದೇ ರೀತಿಯಲ್ಲಿ ಸಂಬಂಧ ಹೊಂದಿಲ್ಲ. ಅದಕ್ಕೆ ಏನಿದ್ದರೂ ಅವರು ಮತ್ತು ಅವರ ಬೆಂಬಲಿಗರೇ ಜವಾಬ್ದಾರರು” ಎಂದು ನಾಸೆರ್ ಕನಾನಿ ಹೇಳಿದ್ದಾರೆ. “ಯಾರೇ ಆಗಲಿ ಅನಗತ್ಯವಾಗಿ ಇರಾನನ್ನು ದೂಷಿಸಬೇಕಾಗಿಲ್ಲ” ಎಂದೂ ಅವರು ಹೇಳಿದರು.
ಪಶ್ಚಿಮ ನ್ಯೂಯಾರ್ಕಿನಲ್ಲಿ ಶುಕ್ರವಾರ 75ರ ಪ್ರಾಯದ ಸಲ್ಮಾನ್ ರಶ್ದಿಯವರು ಒಂದು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಅಪರಿಚಿತನೊಬ್ಬ ಅವರ ಮೇಲೆ ದಾಳಿ ಮಾಡಿ ಚಾಕುವಿನಿಂದ ಹಲವು ಬಾರಿ ಇರಿದಿದ್ದ. ಈ ಚಾಕು ಇರಿತದಿಂದ ರಶ್ದಿಯವರ ಯಕೃತ್ತಿಗೆ, ತೋಳು ಮತ್ತು ಕಣ್ಣಿನ ನರಗಳಿಗೆ ಹಾನಿಯಾಗಿದೆ ಎಂದು ಅವರ ಕಾರ್ಯಕ್ರಮದ ಏಜೆಂಟರು ತಿಳಿಸಿದ್ದಾರೆ.
24ರ ಪ್ರಾಯದ ಹಾದಿ ಮತಾರ್ ಎಂಬ ಯುವಕನನ್ನು ದಾಳಿಕೋರ ಎಂದು ಬಂಧಿಸಲಾಗಿದೆ.