ಮಂಗಳೂರು: ನಗರದ ನೆಹರೂ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇಂಧನ, ಕನ್ನಡ ಮತ್ತು ಸಂಸ್ಕøತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು.
ಬಳಿಕ ಭಾಷಣ ಮಾಡಿದ ಅವರು, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ 750 ಮೆಗಾ ವ್ಯಾಟ್ ವಿದ್ಯುತ್ತಿನ ಬೇಡಿಕೆ ಕಂಡು ಬರುತ್ತಿದ್ದು, ಮುಂದಿನ 5 ರಿಂದ 8 ವರ್ಷಗಳಲ್ಲಿ 250ಕ್ಕಿಂತ ಹೆಚ್ಚು ಮೆಗಾ ವ್ಯಾಟ್ ವಿದ್ಯುತ್ ಬೇಡಿಕೆ ಬರಲಿರುತ್ತದೆ. ಈ ಹಿನ್ನೆಲೆಯಲ್ಲಿ ಅಡಚಣೆ ರಹಿತ ವಿದ್ಯುತ್ತನ್ನು ಸಾರ್ವಜನಿಕರಿಗೆ ನೀಡುವ ಉದ್ದೇಶದಿಂದ ಮಂಗಳೂರಿನಲ್ಲಿ 300 ಕೋಟಿ ರೂ.ಗಳ ವೆಚ್ಚದಲ್ಲಿ 400 ಕಿಲೋ ವ್ಯಾಟ್ (ಕೆವಿ) ವಿದ್ಯುತ್ ಉಪಕೇಂದ್ರವನ್ನು ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ವಿದ್ಯುತ್ ಚಾಲಿತ ವಾಹನಗಳ ಸ್ಟೇಷನ್ಗಳಿಗೆ ಮಂಗಳೂರಿನಲ್ಲಿ ಬೇಡಿಕೆಯಿದ್ದು ಇದರಂತೆ 17 ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲಾಗಿರುತ್ತದೆ ಹಾಗೂ ಮುಂದಿನ ದಿನಗಳಲ್ಲಿ 79 ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಸ್ಟೇಷನ್ ಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಎಂಆರ್ ಎಫ್ ಘಟಕವನ್ನು 2.50 ಕೋಟಿ ರೂ.ಗಳ ವೆಚ್ಚದಲ್ಲಿ ತಂಕ ಎಡಪದವಿನಲ್ಲಿ ಸ್ಥಾಪಿಸಲಾಗುತ್ತಿದೆ. ಪ್ರಸಕ್ತ ವರ್ಷದಲ್ಲಿ ಬೆಳ್ತಂಗಡಿಯ ಉಜಿರೆ, ಪುತ್ತೂರಿನ ಕೆದಂಬಾಡಿ, ಬಂಟ್ವಾಳದ ನರಿಕೊಂಬುವಿನಲ್ಲಿ 3 ಹೆಚ್ಚುವರಿ ಎಂಆರ್ ಎಫ್ ಘಟಕಗಳನ್ನು ನಿರ್ಮಿಸಲು ಅಂದಾಜು 913 ಲಕ್ಷ ರೂ.ಗಳ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದೆ ಎಂದು ಸುನೀಲ್ ಕುಮಾರ್ ತಿಳಿಸಿದರು.
ಶೌಚಾಲಯಗಳಲ್ಲಿ ಉತ್ಪತ್ತಿಯಾಗುವ ಕಪ್ಪುನೀರನ್ನು ವೈಜ್ಞಾನಿಕವಾಗಿ ನಿರ್ವಹಿಸುವ ಸಲುವಾಗಿ ಬಂಟ್ವಾಳ ಗೋಳ್ತಮಜಲು, ಬೆಳ್ತಂಗಡಿ ಉಜಿರೆಯಲ್ಲಿ 1.57 ಕೋಟಿ ರೂ.ಗಳ ವೆಚ್ಚದಲ್ಲಿ ಮಲತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಿಸಲಾಗುತ್ತಿದೆ.
ಅಮೃತ ಸರೋವರ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಿಂದ 75 ಕೆರೆಗಳನ್ನು ಆಯ್ಕೆ ಮಾಡಿಕೊಂಡಿದ್ದು, ಅದರಲ್ಲಿ 15 ಕೆರೆಗಳ ಅಭಿವೃದ್ಧಿಯನ್ನು ಪೂರ್ಣಗೊಳಿಸಲಾಗಿರುತ್ತದೆ. ಅದೇ ರೀತಿ ಅಮೃತ ಉದ್ಯಾನವನ ಕಾರ್ಯಕ್ರಮವನ್ನು ಸಹ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಜಲಜೀವನ್ ವಿಷನ್ ಅನ್ನು ಒಟ್ಟು 3 ಹಂತಗಳಲ್ಲಿ 700 ಕಾಮಗಾರಿಗಳನ್ನು 518 ಕೋಟಿ ರೂ.ಗಳ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಒಟ್ಟು ಹೊಸ 7 ಯೋಜನೆಗಳನ್ನು 487.83 ಕೋಟಿ ರೂ.ಗಳ ಮೊತ್ತದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಅದರಲ್ಲಿ 2 ಯೋಜನೆಗಳು ಜಾರಿಯ ಹಂತದಲ್ಲಿವೆ ಎಂದರು.
ಜಿಲ್ಲೆಗೊಂದು ಗೋಶಾಲೆ ಸ್ಥಾಪನೆ ಯೋಜನೆಯಡಿ ಸರ್ಕಾರದಿಂದ 47 ಲಕ್ಷ ರೂ.ಗಳ ಅನುದಾನ ಬಿಡುಗಡೆಗೊಂಡಿದ್ದು, ಕಡಬ ತಾಲೂಕಿನ ರಾಮಕುಂಜದಲ್ಲಿ ಸೂಕ್ತ ಜಾಗವನ್ನು ಸಹ ಗುರುತಿಸಲಾಗಿರುತ್ತದೆ. ಮುಖ್ಯಮಂತ್ರಿಗಳು ಪ್ರಸಕ್ತ ಸಾಲಿನಲ್ಲಿ ಆಯವ್ಯಯದಲ್ಲಿ ಘೋಷಿಸಲಾದಂತೆ ಜಿಲ್ಲೆಯ 3 ಕಡೆ ಶಿಶುಪಾಲನ ಕೇಂದ್ರಗಳನ್ನು ಸ್ಥಾಪಿಸಲಾಗಿರುತ್ತದೆ. ಉದ್ಯೋಗಸ್ಥ ಮಹಿಳೆಯರ ಅನುಕೂಲಕ್ಕಾಗಿ ಜಿಲ್ಲೆಯಲ್ಲಿ 2 ಕಡೆ ಉದ್ಯೋಗಸ್ಥ ಮಹಿಳೆಯರ ವಸತಿ ಗೃಹವನ್ನು ಪ್ರಾರಂಭಿಸಲಾಗಿರುತ್ತದೆ.
ಹಿಂದುಳದ ವರ್ಗಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉದ್ದೇಶಕ್ಕೆ ಅನುಕೂಲವಾಗುವಂತೆ ಜಿಲ್ಲೆಯಲ್ಲಿ ಬಂಟ್ವಾಳ ತಾಲೂಕು ಪುಂಜಾಲಕಟ್ಟೆಯಲ್ಲಿ 25 ಕೋಟಿ ರೂ.ಗಳ ವೆಚ್ಚದಲ್ಲಿ ನಾರಾಯಣಗುರು ವಸತಿ ಶಾಲೆಯನ್ನು ಸ್ಥಾಪಿಸಲಾಗುತ್ತಿದೆ.
ಸೇನೆ ಮತ್ತು ಪೊಲೀಸ್ ಸೇವೆಗೆ ಸೇರುವ ಯುವಕ, ಯುವತಿಯರಿಗೆ ಸೂಕ್ತ ತರಬೇತಿ ನೀಡಲು ವೀರರಾಣಿ ಅಬ್ಬಕ್ಕ ಸೇನಾ ಆಯ್ಕೆ ಪೂರ್ವ ತರಬೇತಿ ಶಾಲೆಯನ್ನು ಮಂಗಳೂರಿನಲ್ಲಿ ಪ್ರಾರಂಭಿಸಲಾಗುತ್ತಿದೆ. 6 ತಿಂಗಳ ಕಾಲ ಸೇನಾ ಆಯ್ಕೆ ಪೂರ್ವ ತರಬೇತಿ ನೀಡಲು ಚಿಂತಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ರಾಜ್ಯ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ 8000 ಹೊಸ ಮನೆಗಳ ಗುರಿಯನ್ನು ಮಂಜೂರು ಮಾಡಿದ್ದು ಈಗಾಗಲೇ ಫಲಾನುಭವಿಗಳ ಆಯ್ಕೆ ಪೂರ್ಣಗೊಂಡಿರುತ್ತದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 3621 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿರುತ್ತದೆ. 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಪರಿಶಿಷ್ಟ ಪಂಗಡ, ಹಿಂದುಳಿದ ಅಲ್ಪ ಸಂಖ್ಯಾತ ವರ್ಗದ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ಅನುಕೂಲವಾಗುವಂತೆ ದೀನ್ ದಯಾಳ್ ಉಪಾಧ್ಯಾಯ ಸೌಹಾರ್ದ ವಿದ್ಯಾರ್ಥಿ ನಿಲಯ ಸ್ಥಾಪಿಸಲು ಕ್ರಮವಹಿಸಲಾಗುತ್ತಿದೆ ಎಂದು ಸುನೀಲ್ ಕುಮಾರ್ ಹೇಳಿದರು.
ಆಕರ್ಷಣೀಯ ಮಂಗಳೂರು
ಯಕ್ಷಗಾನವನ್ನು ಪ್ರೋತ್ಸಾಹಿಸಲು ಈ ವರ್ಷ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಕ್ಷಗಾನ ಸಮ್ಮೇಳನ ಆಯೋಜಿಸಲು ಚಿಂತಿಸಲಾಗಿದೆ, ಅದಕ್ಕಾಗಿ 2 ಕೋಟಿ ರೂ.ಗಳ ಅನುದಾನವನ್ನು ಮೀಸಲಿಡಲಾಗಿದೆ. ಇದರಂತೆ ಯಕ್ಷಗಾನ ಸಮ್ಮೇಳನವನ್ನು ಆಯೋಜಿಸಲಾಗುವುದು. ಪ್ರವಾಸಿಸ್ನೇಹಿ ಜಿಲ್ಲೆಯನ್ನಾಗಿಸಲು ಅನೇಕ ರೀತಿಯಲ್ಲಿ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ. ಪ್ರಮುಖ ಬೀಚ್ ಗಳನ್ನು ಅಭಿವೃದ್ಧಿಗೊಳಿಸಿ ಪ್ರವಾಸಿಗರನ್ನು ಸೆಳೆಯುವಂತೆ ಮಾಡಲು ಕ್ರಮವಹಿಸಲಾಗುತ್ತಿದೆ ಹಾಗೂ ವಿವಿಧ ಧಾರ್ಮಿಕ ಕ್ಷೇತ್ರಗಳನ್ನು ಸಹ ಪ್ರವಾಸೋದ್ಯಮ ಇಲಾಖೆ ವತಿಯಿಂದ ಮತ್ತು ಹಿಂದೂ ಧಾರ್ಮಿಕ ದತ್ತಿ ಇಲಾಖೆ ವತಿಯಿಂದ ಅಭಿವೃದ್ಧಿಗೊಳಿಸಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆಯಿಂದ ಮೂಲಭೂತ ಸೌಕರ್ಯ ಅಭಿವೃದ್ಧಿ ಯೋಜನೆಗಳಗಾಗಿ 23.6 ಕೋಟಿ ರೂ.ಗಳ ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಕೇಂದ್ರ ಸರ್ಕಾರದಿಂದ ಬೀಮ್ಸ್ ಕಾರ್ಯಕ್ರಮದಡಿ ಬ್ಲೂಫ್ಲಾಗ್ ಬೀಚ್ ಅಭಿವೃದ್ಧಿ ಪಡಿಸಲು ದೇಶಾದ್ಯಂತ 3 ಸಮುದ್ರ ತೀರಗಳನ್ನು ಆಯ್ಕೆ ಮಾಡಲಾಗಿದ್ದು, ಜಿಲ್ಲೆಯ ತಣ್ಣೀರುಬಾವಿ ಕಡಲ ತೀರವು ಆಯ್ಕೆಗೊಂಡಿರುವುದು ಸಂತಸದ ವಿಷಯ. ಇದರಂತೆ ಈ ಬೀಚನ್ನು ಅಭಿವೃದ್ಧಿಪಡಿಸಲಾಗುವುದು.
ದಕ್ಷಿಣ ಕನ್ನಡ ಜಿಲ್ಲೆಯ ಸಾಂಪ್ರದಾಯಕ ಕ್ರೀಡೆ ಕಂಬಳಕ್ಕೆ ಪ್ರೋತ್ಸಾಹ ನೀಡುವ ನೆಲೆಯಲ್ಲಿ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆ ಮಾಡಿ ಕಂಬಳ ಕ್ರೀಡೆಯನ್ನು ಪ್ರೋತ್ಸಾಹಿಸಲಾಗುವುದು ಎಂದು ಉಸ್ತುವಾರಿ ಸಚಿವರು ಹೇಳಿದರು.
ರಾಷ್ಟ್ರೀಯ ಹೆದ್ದಾರಿ 234 ಬಿಸಿರೋಡ್ನಿಂದ ಪುಂಜಾಲಕಟ್ಟೆ ದ್ವಿಪಥ ರಸ್ತೆ ಅಗಲೀಕರಣ ಕಾಮಗಾರಿಯನ್ನು 159.70 ಕೋಟಿ ರೂ.ಗಳ ಮೊತ್ತದಲ್ಲಿ ಪೂರ್ಣಗೊಳಸಲಾಗಿರುತ್ತದೆ ಹಾಗೂ ಪುಂಜಾಲಕಟ್ಟೆಯಿಂದ ಚಾರ್ಮಾಡಿವರೆಗೆ ರಸ್ತೆ ಅಗಲೀಕರಣಕ್ಕೆ 718.52 ಕೋಟಿ ರೂ.ಗಳ ಅನುಮೋದನೆಗೊಂಡು ಟೆಂಡರ್ ಪ್ರಕ್ರಿಯೆಯಲ್ಲಿರುತ್ತದೆ.
ರಾಷ್ಟ್ರೀಯ ಹೆದ್ದಾರಿ 66 ಮತ್ತು 73 ಗಳಲ್ಲಿರುವ ಬಿ.ಸಿ. ರಸ್ತೆ ವಿಸ್ತರಣಾ ಕಾರ್ಯ ಪ್ರಗತಿಯಲ್ಲಿದ್ದು, ಈ ಯೋಜನೆಗೆ 360 ಕೋಟಿ ರೂ.ಗಳ ಅನುದಾನವನ್ನು ಈಗಾಗಲೇ ಬಿಡುಗಡೆಗೊಳಸಲು ಕ್ರಮವಹಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 2,74,646 ಅಂತ್ಯೋದಯ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿರುತ್ತವೆ. ಹೊಸ ಪಡಿತರ ಚೀಟಿಗಾಗಿ ಒಟ್ಟು 13,990 ಅರ್ಜಿಗಳು ಸ್ವೀಕೃತಗೊಂಡಿರುತ್ತದೆ.
ನಗರ ಪ್ರದೇಶದ ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡು ವಾಸಿಸುತ್ತಿರುವ ಜನರಿಗೆ ವಾಸ್ತವ್ಯದ ಕಟ್ಟಡವನ್ನು ಸಕ್ರಮ ಮಾಡಲು 94ಸಿಸಿರಡಿ ಒಟ್ಟು 24,737 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿರುತ್ತದೆ. ಅದೇ ರೀತಿ ಗ್ರಾಮೀಣ ಪ್ರದೇಶದ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿರುವವರಿಗೆ ಸಕ್ರಮೀಕರಿಸಲು 94ಸಿ ರಡಿ ನೀಡಲಾಗಿರುತ್ತದೆ. ಒಟ್ಟು 48,015 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೀಮ್ಡ್ ಫಾರೆಸ್ಟ್ ಗೆ ಸಂಬಂಧಿಸಿದಂತೆ ಹಲವು ವರ್ಷಗಳಿಂದ ಇದ್ದ ಸಮಸ್ಯೆಯನ್ನು ನಮ್ಮ ಸರ್ಕಾರ ಬಗೆಹರಿಸಿರುತ್ತದೆ. ಮೊದಲನೇ ಸಮಿತಿ ಪಟ್ಟಿಯಲ್ಲಿ 66,428.93 ಹೆ. ಪ್ರದೇಶದಲ್ಲಿ ಕ್ಷೇತ್ರ ಪರಿಶೀಲನೆ ನಂತರ ಸುಮಾರು 34,850.48 ಹೆ. ಪ್ರದೇಶವನ್ನು ಡೀಮ್ಡ್ ಫಾರೆಸ್ಟ್ ಪಟ್ಟಿಯಿಂದ ಕೈಬಿಡಲು ಕ್ರಮವಹಿಸಲಾಗಿದೆ ಎಂದು ಸಚಿವ ಸುನೀಲ್ ಕುಮಾರ್ ತಿಳಿಸಿದರು.