ಮಾಲಿನ್ಯ ಮಂಡಳಿಯಿಂದ ಮಣ್ಣಿನ ಸೀಡ್ಸ್ ಗಣಪ ಅಭಿಯಾನ

Prasthutha|

ಬೆಂಗಳೂರು: ಕಳೆದ ಬಾರಿ ಅರಿಷಿಣ ಗಣಪ ಅಭಿಯಾನ ನಡೆಸುವುದರೊಂದಿಗೆ ಗಿನ್ನಿಸ್ ವಿಶ್ವ ದಾಖಲೆ ಮೆರೆದಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಬಾರಿ ಮಣ್ಣಿನ ಗಣಪ ತಯಾರು ಮಾಡುವ. ಸೀಡ್ಸ್ ಗಣಪ ಅಭಿಯಾನದ ಮೂಲಕ ಪರಿಸರ ಸ್ನೇಹಿ ಗಣಪ ಹಬ್ಬ-2022 ವಿಶಿಷ್ಟ ರೀತಿಯಲ್ಲಿ ಆಚರಿಸಲು ನಿರ್ಧರಿಸಿದೆ.

- Advertisement -

ಈ ಬಗ್ಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ ಪಿಸಿಬಿ) ಅಧ್ಯಕ್ಷ ಶಾಂತ್ ತಿಮ್ಮಯ್ಯ, ಇದೇ 28 ರಂದು ಮಧ್ಯಾಹ್ನ 3 ಗಂಟೆಗೆ ಬಸವನಗುಡಿ ನ್ಯಾಷನಲ್ ಕಾಲೇಜು ಆವರಣದಲ್ಲಿ ಶ್ರೀ ವಿದ್ಯಾರಣ್ಯ ಯುವಕ ಸಂಘ ಮತ್ತು ಬೆಂಗಳೂರು ಗಣೇಶ ಉತ್ಸವ ಸಂಘಟನೆಯ ಸಹಭಾಗಿತ್ವದಲ್ಲಿ ಹತ್ತು ಸಾವಿರ ಮಣ್ಣಿನ ಸೀಡ್ಸ್ ಗಣಪನನ್ನು ತಯಾರಿಸಲು ತರಬೇತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು, ಇದರಲ್ಲಿ ಭಾಗವಹಿಸುವವರಿಗೆ ಮಣ್ಣಿನ ಸೀಡ್ಸ್ ಗಣಪನನ್ನು ತಯಾರಿಸಲು ಸ್ಥಳದಲ್ಲೇ ಕಲಿಸಿಕೊಡಲಾಗುತ್ತದೆ ಎಂದರು.

10 ಜನರಿಗೊಬ್ಬರಂತೆ ಮೂರ್ತಿ ತಯಾರಿಕೆ ನಿಪುಣ ಕಲಾವಿದರನ್ನು ನಿಯೋಜಿಸಲಾಗುತ್ತಿದ್ದು, ಎಲ್ಲರಿಗೂ ಏಕಕಾಲದಲ್ಲಿ ಹೇಳಿಕೊಡಲಾಗುತ್ತದೆ. ಹೀಗೆ ತಾವೇ ತಯಾರಿಸಿದ ಗಣಪನನ್ನು ಬಳಿಕ ಮನೆಗೆ ಕೊಂಡ್ಯೊಯ್ಯಬಹುದಾಗಿದೆ. ಗಣಪನ ತಯಾರಿಕೆಗೆ ಬೇಕಾಗುವ ಹದಗೊಳಿಸಿದ ಮೂರೂವರೆ ಕೆಜಿಯಷ್ಟು ಮಣ್ಣು, ಕಡ್ಡಿ, ನೀರಿನ ಲೋಟ, ಮರದ ತುಂಡು, ಅರ್ಧ ಮೀಟರ್ ಬಟ್ಟೆ, ಗಣಪನ ಮೂರ್ತಿಯನ್ನು ಹಾಕಿಕೊಳ್ಳಲು ಸಣ್ಣದೊಂದು ಕೈಚೀಲವನ್ನು ಪ್ರತಿಯೊಬ್ಬರಿಗೂ ಉಚಿತವಾಗಿ ನೀಡಲಾಗುವುದು. ಕನಿಷ್ಠ 10ಸಾವಿರ ಮಂದಿ ಭಾಗವಹಿಸುವ ಈ ಬೃಹತ್ ಕಾರ್ಯಕ್ರಮವು ಅಂದು ಗಿನ್ನಿಸ್ ಪುಸ್ತಕದಲ್ಲಿ ದಾಖಲೆಯಾಗಿ ಸೇರಲಿದೆ. ಈ ಈವೆಂಟ್‌ ನಲ್ಲಿ ಭಾಗವಹಿಸಲಿಚ್ಛಿಸುವವರು ಸಾಕಷ್ಟು ಮೊದಲೇ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಗಣೇಶ ಮೂರ್ತಿ ತಯಾರಿಸುವ ಮಣ್ಣಿನಲ್ಲಿ ವಿವಿಧ ಜಾತಿಯ ಹೂವು ಮತ್ತು ಔಷಧಿ ಸಸ್ಯಗಳ ಬೀಜಗಳನ್ನು ಬೆರೆಸಲಾಗಿರುವುದು ಮತ್ತೊಂದು ವಿಶೇಷವಾಗಿದೆ ಎಂದರು.

- Advertisement -

ಇನ್ನು, ಜುಲೈ 1ರಂದು ಜಾರಿಯಾದ ಏಕ ಬಳಕೆ ಪ್ಲಾಸ್ಟಿಕ್ ನಿಷೇಧವು ಸಾಕಷ್ಟು ಸವಾಲುಗಳ ನಡುವೆಯೂ ಯಶಸ್ಸಿನತ್ತ ಸಾಗಿದ್ದು, ಮುಂದಿನ ದಿನಗಳಲ್ಲಿ ಜಿಲ್ಲೆ ಜಿಲ್ಲೆಯಲ್ಲೂ ಏಕ ಬಳಕೆ ಪ್ಲಾಸ್ಟಿಕ್ ನಿರ್ಬಂಧ ಜಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇಲ್ಲಿಯವರೆಗೆ ಏಕ ಬಳಕೆ ಪ್ಲಾಸ್ಟಿಕ್ ನಿಷೇಧದ ಅಡಿಯಲ್ಲಿ 150 ಟನ್ ಸಿಂಗಲ್ ಯೂಸ್ ಪ್ಲಾಸ್ಟಿಕ್‌ ಅನ್ನು ವಶಪಡಿಸಿಕೊಳ್ಳಲಾಗಿದ್ದು, 50 ಲಕ್ಷ ರೂ.ಗಳ ದಂಡ ವಿಧಿಸಲಾಗಿದೆ ಎಂದು ಶಾಂತ ತಿಮ್ಮಯ್ಯ ಅವರು ತಿಳಿಸಿದರು.

 ಕೆಎಸ್‌ ಪಿಸಿಬಿ ಆಯುಕ್ತರಾದ ಶ್ರೀನಿವಾಸ್, ಶ್ರೀ ವಿದ್ಯಾರಣ್ಯ ಯುವಕ ಸಂಘದ ಶಿವಶಂಕರ್, ಬೆಂಗಳೂರು ಗಣೇಶ ಉತ್ಸವ ಸಂಘಟನೆಯ ನಂದೀಶ್ ಎಸ್.ಮರಿಯಪ್ಪ ಅವರು ಉಪಸ್ಥಿತರಿದ್ದರು.  



Join Whatsapp