ಗ್ರಾಮೀಣ ವೃತ್ತಿ ನಿರತರ ಆರ್ಥಿಕ ಸಬಲೀಕರಣಕ್ಕಾಗಿ ವಿಶೇಷ ಕಾರ್ಯಕ್ರಮ ; ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

Prasthutha|

ಬೆಂಗಳೂರು, ಆ, 12; ಗ್ರಾಮೀಣ ಪ್ರದೇಶದಲ್ಲಿ ವಿವಿಧ ವೃತ್ತಿಯಲ್ಲಿ ತೊಡಗಿರುವವರಿಗೆ ವಿಶೇಷ ಅನುದಾನ ನೀಡುವ ಕುರಿತು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿದ್ದು, ಇವರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ವಿಶೇಷ ಕಾರ್ಯಕ್ರಮ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.

- Advertisement -

ಬಡಗಿ, ಕಮ್ಮಾರರು, ಬುಟ್ಟಿ ಹೆಣೆಯುವವರು, ಸವಿತ ಸಮಾಜದವರು ಒಳಗೊಂಡಂತೆ ಈ ಸಮುದಾಯಕ್ಕೆ ವಿಶೇಷ ಕಾರ್ಯಕ್ರಮ ರೂಪಿಸಲು ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಲಾಗಿದೆ. ವೃತ್ತಿ ನಿರತರಿಗೆ ವಿಶೇಷ ಅನುದಾನ ಒದಗಿಸುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಆಯೋಜಿಸಿದ್ದ ಕಾಯಕ ಯೋಗಿ, ಶ್ರೇಷ್ಠ ಶರಣ ಶ್ರೀ ನುಲಿಯ ಚಂದಯ್ಯರ 915 ನೇ ಜಯಂತೋತ್ಸವದ ಸರ್ಕಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಅವರು, ಎಲ್ಲಾ ವೃತ್ತಿನಿರತರಿಗೆ ವಿಶೇಷ ಅನುದಾನ ಒದಗಿಸಲಾಗುವುದು. ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಇಲ್ಲದೇ ವೃತ್ತಿಯನ್ನೇ ಅವಲಂಬಿಸಿರುವವರಿಗೆ ಆರ್ಥಿಕವಾಗಿ ಸುರಕ್ಷತೆಯ ಚಕ್ರವನ್ನು ಒದಗಿಸುವುದಾಗಿ ಪ್ರಕಟಿಸಿದರು.

- Advertisement -

ಇದಲ್ಲದೇ ವೃತ್ತಿ ರಂಗಭೂಮಿಯನ್ನು ಉಳಿಸಿ ಬೆಳೆಸಲು ಸರ್ಕಾರ ಒತ್ತು ನೀಡಲಿದೆ. ರಂಗಭೂಮಿ ಸಾಕಷ್ಟು ಸಮಸ್ಯೆಗಳ ಸುಳಿಗೆ ಸಿಲುಕಿದೆ. ಬೆಂಗಳೂರು ನಗರದಿಂದ ಹಳ್ಳಿಯವರೆಗೆ ವೃತ್ತಿ ರಂಗಭೂಮಿ ಉಳಿಸಲು ವಿಶೇಷ ಅನುದಾನ, ಸಹಾಯ ಒದಗಿಸಲಾಗುವುದು ಎಂದು ಭರವಸೆ ನೀಡಿದರು.

ಕುಳುವ ಸಮುದಾಯ ಶಿಕ್ಷಣ, ಉದ್ಯೋಗ, ಸಬಲೀಕರಣಗೊಳ್ಳಬೇಕು. ಅದರಲ್ಲೂ ವಿಶೇಷವಾಗಿ ರಾಜಕೀಯವಾಗಿ ಮುಂದೆ ಬರಬೇಕು. ಎದೆ ಉಬ್ಬಿಸಿ ನಡೆಯುವಂತಾಗಬೇಕು ಎಂದು ಮುಖ್ಯಮಂತ್ರಿ ಆಶಿಸಿದರು.

ಶರಣರ ಪರಂಪರೆ ಅತ್ಯುತ್ತಮವಾದದ್ದು. ಕಾಯಕವೇ ಕೈಲಾಸ ಎಂದು ಬದುಕಿ ತೋರಿದ್ದಾರೆ. ಪ್ರತಿಯೊಂದು ವೃತ್ತಿಗೂ ತನ್ನದೇ ಆದ ಘನತೆ, ಗೌರವವಿದೆ. ಬಡಗಿ ಹಲವಾರು ದೇವಾಲಯಗಳನ್ನು ಕಟ್ಟಿರುತ್ತಾನೆ. ಮಂಗಳ ವಾದ್ಯವಿಲ್ಲದಿದ್ದರೆ ಮಂಗಳ ಕಾರ್ಯ ನಡೆಯಲು ಸಾಧ್ಯವಿಲ್ಲ. ಬಸವಣ್ಣ ದೇವರಲ್ಲ, ಕಾಯದಿಂದ ಅವರು ದೇವರಾದ ಮಹಾನ್ ಚೇತನ. ಬದುಕನ್ನು ಅತ್ಯಂತ ಶ್ರೀಮಂತಗೊಳಿಸಿದ ದೇವಮಾನವ ಎಂದು ಬಣ್ಣಿಸಿದರು.



Join Whatsapp