“ಬಾಂಗ್ಲಾದೇಶಿ ಕಂಪನಿಗೆ `ಹರ್ ಘರ್ ತಿರಂಗ’ ಟೆಂಡರ್’’: ಅಭಿಯಾನ ಬಹಿಷ್ಕರಿಸಲು ಯತಿ ನರಸಿಂಹಾನಂದ ಕರೆ

Prasthutha|

ನವದೆಹಲಿ: ಮೋದಿ ಸರ್ಕಾರದ ಹರ್ ಘರ್ ತಿರಂಗ ಅಭಿಯಾನವನ್ನು ಹಿಂದೂಗಳು ಬಹಿಷ್ಕಾರಿಸುವಂತೆ ಸಂಘಪರಿವಾರದ ವಿವಾದಿತ ಮುಖಂಡ ಯತಿ ನರಸಿಂಹಾನಂದ ಅವರು ಕರೆ ನೀಡಿದ್ದಾರೆ.

- Advertisement -

ಹರ್ ಘರ್ ತಿರಂಗ ಅಭಿಯಾನಕ್ಕೆ ಬೇಕಾದ ತ್ರಿವರ್ಣ ಧ್ವಜಗಳನ್ನು ನಿರ್ಮಿಸಲು ಬಾಂಗ್ಲಾದೇಶದ ಮುಸ್ಲಿಮ್ ಒಡೆತನದ ಕಂಪೆನಿಗೆ ಟೆಂಡರ್ ಕೊಟ್ಟಿದ್ದಾರೆಂದು ಆರೋಪಿಸಿರುವ ಯತಿ ನರಸಿಂಹಾನಂದ , ಹಿಂದೂಗಳು ಈ ಧ್ವಜಗಳನ್ನು ಖರೀದಿಸಬಾರದು, ಪ್ರಧಾನಿ ಮೋದಿಯ ಹರ್ ಘರ್ ತಿರಂಗ ಅಭಿಯಾನವನ್ನು ಬಹಿಷ್ಕರಿಸಬೇಕು ಎಂದು ಕರೆ ನೀಡಿದ್ದಾರೆ.

ಈ ಕುರಿತ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹರ್ ಘರ್ ತಿರಂಗ ಅಭಿಯಾನಕ್ಕಾಗಿ ಹೊಸ ಧ್ವಜಗಳನ್ನು ಬಾಂಗ್ಲಾದೇಶ ಮೂಲದ ಸಲಾವುದ್ದೀನ್ ಮಾಲಕತ್ವದ ಕಂಪೆನಿ ಸರಬರಾಜು ಮಾಡುತ್ತಿದ್ದು, ಅವುಗಳನ್ನು ಹಿಂದೂಗಳು ಖರೀದಿಸದಂತೆ ಯತಿ ನರಸಿಂಹಾನಂದ ಆಗ್ರಹಿಸಿದ್ದಾರೆ.

- Advertisement -

ಆಡಳಿತರೂಢ ಬಿಜೆಪಿ ಪಕ್ಷವು ಮುಸ್ಲಿಮರನ್ನು ಆರ್ಥಿಕವಾಗಿ ಸಬಲೀಕರಣಗೊಳಿಸಲು ಈ ಅಭಿಯಾನವನ್ನು ಪ್ರಾರಂಭಿಸಿರುವುದರಿಂದ ಈ ಅಭಿಯಾನದ ಪ್ರಚಾರವನ್ನು ಬಹಿಷ್ಕರಿಸುವಂತೆ ಆಗ್ರಹಿಸಿದ್ದಾರೆ. ನಿಮಗೆ ಧ್ವಜ ಬೇಕಾದಲ್ಲಿ ನಿಮ್ಮಲ್ಲಿರುವ ಹಳೆಯದನ್ನು ಹುಡುಕಿ, ಆದರೆ ಸಲಾವುದ್ದೀನ್ ಅವರಿಂದ ಹೊಸ ಧ್ವಜಗಳನ್ನು ಖರೀದಿಸಬೇಡಿ. ಆತನಿಗೆ ಒಂದು ರೂಪಾಯಿ ಕೊಡಬೇಡಿ ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ.

ಯಾವುದೇ ಹಿಂದೂಗಳು ಮುಸ್ಲಿಮರಿಂದ ಏನನ್ನಾದರೂ ಖರೀದಿ ಮಾಡಿದರೆ ಅದು ಜಿಹಾದ್ ಎಂದು ಹೇಳಿದ ಯತಿ, ಆ ಹಣ ಹಿಂದೂಗಳನ್ನು ಕೊಲ್ಲಲು ಉಪಯೋಗಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಅಲ್ಲದೆ ಮುಸ್ಲಿಮರನ್ನು ಅವ್ಯಾಚ ಶಬ್ದಗಳಿಂದ ನಿಂದಿಸುವ ಮೂಲಕ ಆತ ಮತ್ತೆ ನಾಲಗೆಯನ್ನು ಹರಿಯಬಿಟ್ಟಿದ್ದಾನೆ.



Join Whatsapp