‘ತಿರಂಗ ಯಾತ್ರೆಯಲ್ಲಿ ಶಿಕ್ಷಣ ಸಚಿವರ ಸಮ್ಮುಖದಲ್ಲೇ ರಾಷ್ಟ್ರಧ್ವಜಕ್ಕೆ ಅವಮಾನ’: ವಿಪಕ್ಷಗಳಿಂದ ಆಕ್ರೋಶ

Prasthutha|

ತುಮಕೂರು: ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಸಮ್ಮುಖದಲ್ಲೇ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಅಂಗವಾಗಿ ನಡೆಯುವ ಅಮೃತ ಮಹೋತ್ಸವ ಕಾರ್ಯಕ್ರಮದ ಭಾಗವಾಗಿ ತಿಪಟೂರಿನಲ್ಲಿ ABVP ವತಿಯಿಂದ ಯಾತ್ರೆ ಆಯೋಜಿಸಲಾಗಿತ್ತು. ಈ ತಿರಂಗ ಯಾತ್ರೆಯಲ್ಲಿ ಶಿಕ್ಷಣ ಸಚಿವ ನಾಗೇಶ್ ಅವರು ಕೂಡ ಭಾಗಿಯಾಗಿದ್ದರು.

- Advertisement -

ಈ ತಿರಂಗ ಯಾತ್ರೆಯಲ್ಲಿ ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ABVPಯ ಧ್ವಜ ಹಾರಾಡಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಾಷ್ಟ್ರಧ್ವಜಕ್ಕಿಂತ ಎತ್ತರದಲ್ಲಿ ಯಾವುದೇ ಬಾವುಟ ಹಾರಾಡಬಾರದೆಂಬ ನಿಯಮವಿದೆ. ಆದರೆ ಶಿಕ್ಷಣ ಸಚಿವರು ಭಾಗಿಯಾಗಿದ್ದ ABVPಯವರ ತಿರಂಗ ಯಾತ್ರೆಯಲ್ಲಿ ಧ್ವಜಸಂಹಿತೆಯ ಉಲ್ಲಂಘನೆಯಾಗಿದ್ದು, ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರ ಸಮ್ಮುಖದಲ್ಲೇ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬರುತ್ತಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಆಕ್ರೋಶ ವ್ಯಕ್ತಪಡಿಸಿದ್ದು, ‘ತ್ರಿವರ್ಣ ಧ್ವಜದ ಮೇಲೆ ಯಾವ ಧ್ವಜವನ್ನೇ ಹಾರಿಸುವುದು ಧ್ವಜ ಸಂಹಿತೆಯ ಸ್ಪಷ್ಟ ಉಲ್ಲಂಘನೆ. ಶಿಕ್ಷಣ ಸಚಿವರಿಗೆ ಕನಿಷ್ಠ ಕಾನೂನಿನ ತಿಳುವಳಿಕೆ ಇಲ್ಲದೆ,ಭಾಗವಧ್ವಜವನ್ನ ತ್ರಿವರ್ಣ ಧ್ವಜಕ್ಕಿಂತ ಎತ್ತರವಾಗಿ ಹಿಡಿದುಕೊಂಡು ಅಪರಾಧ ಮಾಡಿದ್ದಲ್ಲದೇ RSS ಮನಸ್ಥಿತಿಯನ್ನ ತೋರಿಸಿದ್ದಾರೆ. ಕೂಡಲೇ ಬಿ.ಸಿ. ನಾಗೇಶ್ ಅವರ ವಿರುದ್ಧ ಧ್ವಜಸಂಹಿತೆಯಡಿ ಕೇಸ್ ಹಾಕಬೇಕು’ ಎಂದು ಒತ್ತಾಯಿಸಿದ್ದಾರೆ.



Join Whatsapp