ಕಲ್ಯಾಣ ಕರ್ನಾಟಕ ಎಂದು ಹೆಸರು ಬದಲಾಯಿಸಿದ್ದನ್ನೇ ಸಾಧನೆ ಎಂದು ಬಿಜೆಪಿ ಬೀಗುತ್ತಿದೆ: ಸಿದ್ಧರಾಮಯ್ಯ

Prasthutha|

ಬೆಂಗಳೂರು: ಹಿಂದುಳಿದ ಜಿಲ್ಲೆಗಳಿಗೆ ವಿಶೇಷ ಪ್ರಾತಿನಿಧ್ಯ ನೀಡಲು ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಮುಂತಾದ ಹಿರಿಯ ನಾಯಕರು ಮತ್ತು ಈ ಭಾಗದ ಜನರು ಎಂಥ ಹೋರಾಟ ನಡೆಸಿದ್ದರು ಎಂಬುದರ ತಿಳುವಳಿಕೆ ಇಲ್ಲದಂತೆ ಸರ್ಕಾರ ವರ್ತಿಸುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

- Advertisement -

ಕಲ್ಯಾಣ ಕರ್ನಾಟಕದ ಜನರಿಗೆ ಮಾಡುತ್ತಿರುವ ಅನ್ಯಾಯವನ್ನು ಸರ್ಕಾರ ಕೂಡಲೇ ನಿಲ್ಲಿಸಬೇಕೆಂದು ಅವರು ಪತ್ರಿಕಾ ಹೇಳಿಕೆ ಮೂಲಕ ಆಗ್ರಹಿಸಿದ ಸಿದ್ದು, ನಮ್ಮ ಸರ್ಕಾರದ ಅವಧಿಯಲ್ಲಿ ಸುಮಾರು 36000 ಕ್ಕೂ ಹೆಚ್ಚಿನ ತರುಣ ತರುಣಿಯರಿಗೆ ಉದ್ಯೋಗ ನೀಡಿದ್ದೆವು. ವಿಶೇಷ ಪ್ರಾತಿನಿಧ್ಯ ನೀಡಿ ಮೂಲಭೂತ ಸೌಲಭ್ಯ ಒದಗಿಸಿದ್ದೆವು. ಆದರೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 3 ವರ್ಷವಾಯಿತು. ಆದರೆ ಇದುವರೆಗೆ ಒಂದೇ ಒಂದು ಉದ್ಯೋಗವನ್ನೂ ಯುವಜನರಿಗೆ ನೀಡಿಲ್ಲ ಎಂದು ತಿಳಿಸಿದರು.

ಮುಖ್ಯಮಂತ್ರಿಯವರು ಅಭಿವೃದ್ಧಿ ಕಾಮಗಾರಿಗಳಿಗೆ ಹಣ ನೀಡಿದ್ದೇವೆ ಎಂದು ಹೇಳುತ್ತಿದ್ದಾರೆಯೇ ಹೊರತು ಕಾಮಗಾರಿಗಳು ಅನುಷ್ಠಾನವಾಗಿ ಜನರ ಬಳಕೆಗೆ ದೊರೆತಿದ್ದು ಕಾಣಲು ಸಾಧ್ಯವಾಗುತ್ತಿಲ್ಲ. ಸರ್ಕಾರದ ಅರಾಜಕ ಆಡಳಿತ ಹಾಗೂ ತೀವ್ರಗೊಂಡ ಭ್ರಷ್ಠಾಚಾರದ ಕಾರಣದಿಂದ ಕಾಮಗಾರಿಗಳು ಅನುಷ್ಠಾನವಾಗದೆ ಹಾಗೆ ಉಳಿದಿವೆ. ಬಹಳಷ್ಟು ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನೇ ನೀಡಿಲ್ಲವೆಂಬ ದಾಖಲೆ ನನ್ನ ಬಳಿ ಇದೆ. 2019 ರ 11 ಕಾಮಗಾರಿಗಳಿಗೆ, 2020 ರ 102 ಕಾಮಗಾರಿಗಳಿಗೆ, 2021 ರ 164 ಕಾಮಗಾರಿಗಳಿಗೆ ಒಟ್ಟು 277 ಕಾಮಗಾರಿಗಳಿಗೆ ಇದುವರೆಗೆ ಅಧಿಕಾರಿಗಳು ಆಡಳಿತಾತ್ಮಕ ಅನುಮೋದನೆ ನೀಡಿಲ್ಲ ಎಂದು ಹೇಳಿದರು.

- Advertisement -

ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆಯನ್ನೆ ನೀಡದಿದ್ದರೆ ಅವುಗಳು ಅನುಷ್ಠಾನವಾಗಿ ಸಾರ್ವಜನಿಕರು ಅವುಗಳನ್ನು ಬಳಕೆ ಮಾಡುವುದು ಯಾವಾಗ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ, ನಮ್ಮ ಸರ್ಕಾರದ ಅವಧಿಯಲ್ಲಿ ಈ ಮಂಡಳಿಯ ಅಧ್ಯಕ್ಷರಾಗಿ ಸಚಿವರು ಕೆಲಸ ಮಾಡುತ್ತಿದ್ದರು. ಈಗ ಶಾಸಕರೊಬ್ಬರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಅವರಿಗೆ ತನ್ನ ಜಿಲ್ಲೆಯ ಅಧಿಕಾರಿಗಳಿಂದಲೆ ಕೆಲಸ ತೆಗೆಯಲು ಸಾಧ್ಯವಾಗುತ್ತಿಲ್ಲ. ವಸ್ತು ಸ್ಥಿತಿ ಹಾಗಿದ್ದಾಗ ಇತರೆ ಜಿಲ್ಲೆಗಳ ಅಧಿಕಾರಿಗಳಿಂದ ಕೆಲಸವನ್ನು ಹೇಗೆ ತೆಗೆದಾರು? ಹಾಗಾಗಿ ಪರಿಸ್ಥಿತಿ ಅರಾಜಕವಾಗಿದೆ.

ಬಿಜೆಪಿ ಸರ್ಕಾರಗಳು ಉದ್ಯೋಗವನ್ನೂ ನೀಡುತ್ತಿಲ್ಲ. ಮೂಲಭೂತ ಸೌಲಭ್ಯವನ್ನೂ ಒದಗಿಸುತ್ತಿಲ್ಲ. ಕಮಿಷನ್ ದಂಧೆ ಮಾತ್ರ ನಿರಾತಂಕವಾಗಿ ನಡೀತಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿಯೆ ಅತ್ಯಂತ ಹಿಂದುಳಿದ ಈ ಜಿಲ್ಲೆಗಳ ಮಕ್ಕಳು, ಜನರು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಲಸೆ ಸಮಸ್ಯೆ ಇನ್ನೂ ನಿಂತಿಲ್ಲ. ಕೈಗಾರಿಕೆಗಳ ಸ್ಥಾಪನೆಗೆ ಕ್ರಮ ವಹಿಸಿಲ್ಲ. ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರ ಯಾವ ಉದ್ದೇಶದಿಂದ ಸಂವಿಧಾನದ 371[ಜೆ] ಅನುಷ್ಠಾನ ಮಾಡಿತ್ತೊ ಅದರ ಮೂಲ ಆಶಯವನ್ನು ಬಿಜೆಪಿ ಸರ್ಕಾರ ಸಂಪೂರ್ಣವಾಗಿ ಹಾಳುಗೆಡವಲು ಹೊರಟಿದೆ.

ಬಿಜೆಪಿಯವರು ಅಧಿಕಾರಕ್ಕೆ ಬಂದ ಮೇಲೆ ಜನರಿಗೆ ಒಂದು ಮನೆಯನ್ನೂ ನೀಡಿಲ್ಲ. ನಮ್ಮ ಸರ್ಕಾರದ ಅವಧಿಯಲ್ಲಿ ನೀಡಿದ್ದ ಮನೆ ನಿರ್ಮಾಣದ ಆದೇಶಗಳನ್ನು ರದ್ದು ಮಾಡಿದರು. ಆದರೆ ಈಗ ಮನೆ ಮನೆಯ ಬಾವುಟ ಹಾರಿಸಿ ಎಂದು ಹೇಳತೊಡಗಿದ್ದಾರೆ. ಮನೆಗಳೇ ಇಲ್ಲದ ಜನರು ಎಲ್ಲಿಂದ ಧ್ವಜ ಹಾರಿಸಬೇಕು? ಜನರನ್ನು ನೆಮ್ಮದಿಯಾಗಿರುವಂತೆ ನೋಡಿಕೊಳ್ಳುವುದು ರಾಷ್ಟ್ರಪ್ರೇಮವಾಗುತ್ತದೆ, ಜನರನ್ನು ನರಕಕ್ಕೆ ತಳ್ಳುವುದು ರಾಷ್ಟ್ರ ದ್ರೋಹವಾಗುತ್ತದೆ ಎಂಬ ಕನಿಷ್ಠ ತಿಳುವಳಿಕೆ ಇಲ್ಲದಂತೆ ಬಿಜೆಪಿಯವರು ವರ್ತಿಸುತ್ತಿದ್ದಾರೆ.

ಧ್ವಜ ಖರೀದಿಸದಿದ್ದರೆ ಆಹಾರ ಧಾನ್ಯ ಕೊಡುವುದಿಲ್ಲವೆಂದು ಸರ್ಕಾರಗಳು ಹೇಳುತ್ತಿವೆ. ಇದು ಅಮಾನವೀಯ ವರ್ತನೆ ಎಂದು ಬಿಜೆಪಿಯ ವರಣ್ ಗಾಂಧಿ ಹೇಳಿದ್ದಾರೆ. ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದ ಬಿಜೆಪಿಯ ವಂಶಸ್ಥರು ಈಗ ರಾಷ್ಟ್ರ ಧ್ವಜಕ್ಕೂ ಅಪಚಾರ ಮಾಡುತ್ತಿದ್ದಾರೆ. ಒಂದು ಕಡೆ ಲಂಚ ನಿರಾತಂಕವಾಗಿ ನಡೆಯುತ್ತಿದೆ. ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯ ಹಿಂದು ಹಿಂದಕ್ಕೆ ಹೋಗುತ್ತಿದೆ. ಬಿಜೆಪಿ ಕೇವಲ ಘೋಷಣೆಗಳಲ್ಲಿ ಕಾಲ ತಳ್ಳುತ್ತಿದೆ. ತನ್ನ ಬಕಾಸುರ ಜೇಬುಗಳನ್ನು ಮಾತ್ರ ಕೊಬ್ಬಿಸಿಕೊಳ್ಳುತ್ತಿದೆ.

ಆದ್ದರಿಂದ ಈ ಕೂಡಲೆ ಬಾಕಿಯಾಗಿರುವ ಎಲ್ಲ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಬೇಕು. ಬಜೆಟ್ ಗಾತ್ರಕ್ಕೆ ಅನುಗುಣವಾಗಿ ಈ ಭಾಗಕ್ಕೆ ಅನುದಾನ ಒದಗಿಸಬೇಕು. ಖಾಲಿ ಇರುವ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿಶೇಷವಾಗಿ ಕೈಗಾರಿಕೆಗಳನ್ನು ಸ್ಥಾಪಿಸಿ ವಲಸೆ ತಪ್ಪಿಸಬೇಕು. ಅಪೌಷ್ಟಿಕತೆಯಿಂದ ಬಳಲುತ್ತಿರುವವರನ್ನು ಗುರ್ತಿಸಿ ಅವರಿಗೆ ಸಮರ್ಪಕ ಆಹಾರ, ಔಷಧ ಇತ್ಯಾದಿಗಳನ್ನು ಒದಗಿಸಬೇಕು, ಸಮರ್ಪಕವಾದ ಮೂಲಭೂತ ಸೌಲಭ್ಯಗಳನ್ನು ಯಾವುದೇ ಸಬೂಬು ಹೇಳದೆ ಒದಗಿಸಬೇಕು ಹಾಗೂ ಸಮರ್ಥವಾದವರನ್ನು ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಬೇಕೆಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.



Join Whatsapp