ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನದ ಆವರಣದಲ್ಲಿ ಪೀಕೆ ಸಮೂಹದ ಸಹಯೋಗದಡಿ ಆಧುನಿಕ 3ಡಿ ಮುದ್ರಣ ಸೌಲಭ್ಯವನ್ನು ಅನಾವರಣಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಪೀಕೆ ಗ್ರೂಪ್ ಮತ್ತು ಬೆಂಗಳೂರು ಏರ್ ಪೋರ್ಟ್ ಸಿಟಿ ಲಿಮಿಟೆಡ್ (ಬಿಎಸಿಎಲ್) ಸಹಯೋಗದಲ್ಲಿ ಈ ವಿನೂತನ ಎಂಜಿನಿಯರಿಂಗ್, ತಾಂತ್ರಿಕ ಸಹಯೋಗಕ್ಕೆ ಈಗ ಆದ್ಯತೆ ದೊರೆ ತಂದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಆರೋಗ್ಯ ಕ್ಷೇತ್ರ, ಸುಸ್ಥಿರ ನಿರ್ಮಾಣ, ವೈಮಾನಿಕ ಕ್ಷೇತ್ರದಲ್ಲಿ ಸಾಕಷ್ಟು ಬೇಡಿಕೆ ಇರುವ 3ಡಿ ತಂತ್ರಜ್ಞಾನ ಕೇಂದ್ರ ಸ್ಥಾಪನೆಯಾಗಿದೆ. ಇದರಿಂದ ವಿಮಾನ ನಿಲ್ದಾಣವೂ ತಾಂತ್ರಿಕತೆಗೆ ಪ್ರೋತ್ಸಾಹ ನೀಡುವ ಸ್ಥಾನವಾಗಿ ಮಾರ್ಪಾಡು ಆಗಲಿದೆ.
ಪ್ರತಿಯೊಂದು ಕೈಗಾರಿಕೆಗಳೊಂದಿಗೆ ಆವಿಷ್ಕಾರಿ ಉತ್ಪನ್ನಗಳಿಗೆ ಅನುಕೂಲವಾಗುವಂತೆ ಸೃಜನಶೀಲತೆ ಹೆಚ್ಚಿಸಲು 3ಡಿ ಪ್ರಿಂಟಿಂಗ್ ಅನುಷ್ಠಾನಗೊಳಿಸಲಾಗುವುದು. ವಿಮಾನ ನಿಲ್ದಾಣವನ್ನು ಜಾಗತಿಕ ತಾಣವನ್ನಾಗಿ ಬದಲಾವಣೆ ಮಾಡಲು ಇದು ಸಹಕಾರಿಯಾಗಿದೆ ಬಿಎಸಿಎಲ್ ನ ರಾವ್ ಮುನುಕುಟ್ಲ ತಿಳಿಸಿದ್ದಾರೆ.
3ಡಿ ಮುದ್ರಣ ಕುರಿತು ತರಬೇತಿ ಸೇರಿದಂತೆ ನುರಿತ ವಿದ್ಯಾರ್ಥಿಗಳ ಕೌಶಲ ಹೆಚ್ಚಿಸುವಂತೆ ಕಾರ್ಯಕ್ರಮಗಳನ್ನು ವಿವಿಧ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಪ್ರಾರಂಭಿಸುವ ಉದ್ದೇಶ ಹೊಂದಿದ್ದೇವೆ ಎಂದು ತಿಳಿಸಿದ್ದಾರೆ.
ನಮ್ಮ ಸಂಸ್ಥೆಯು ವಿನ್ಯಾಸ ಆಧರಿತ ಆಲೋಚನೆಗಳು ಹಾಗೂ ಗ್ರಾಹಕರಿಗೆ ಅವಶ್ಯಕತೆ ಇರುವ ಸೇವೆ ನೀಡುವಲ್ಲಿ ಪರಿಣತ ಹೊಂದಿದೆ. ಯುವಜನರಲ್ಲಿ ಹಾಗೂ ಉತ್ಸಾಹಿಗಳಿಗೆ 3ಡಿ ವಿನ್ಯಾಸ ಕುರಿತು ತರಬೇತಿ ನೀಡಲಿದ್ದೇವೆ ಎಂದು ಪೀಕೆ ಗ್ರೂಪ್ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಕೆ.ಇ. ಶಾನವಾಝ್ ಮಾಹಿತಿ ನೀಡಿದ್ದಾರೆ.
3ಡಿ ಮುದ್ರಣ ತಂತ್ರಜ್ಞಾನವೂ ಕಟ್ಟಡ ವಿನ್ಯಾಸ, ನಿರ್ಮಾಣ, ಆಟೊ ಮೊಬೈಲ್ ಕ್ಷೇತ್ರ, ಸೇನೆ, ವೈಮಾನಿಕ ಉದ್ಯಮ, ಆಭರಣ ವಿನ್ಯಾಸ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರದಲ್ಲಿ ಬೇಡಿಕೆ ಹೊಂದಿದೆ ಎಂದು ತಿಳಿಸಿದ್ದಾರೆ.
‘ನಮ್ಮ ಏರ್ಪೋರ್ಟ್ ಸಿಟಿಯನ್ನು ಸ್ಮಾರ್ಟ್ ಆಗಿಸಲು ಸಕ್ರಿಯವಾಗಿದ್ದೇವೆ. ನಮ್ಮ ಸ್ಮಾರ್ಟ್ ಸ್ಟ್ರೀಟ್ ಲೈಟ್ ಸಿಸ್ಟಂ ಭಾರತದಲ್ಲಿ ವಿನೂತನ ಬಗೆಯ ವಿಮಾನ ನಿಲ್ದಾಣದ ಇಕೊಸಿಸ್ಟಂ ಆಗಿದೆ. ನಮಗೆ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಡಿಜಿಟಲೀಕರಣಕ್ಕಾಗಿ ಮೋಸ್ಟ್ ಇನ್ನೊವೇಟಿವ್ ಬೆಸ್ಟ್ ಪ್ರಾಕ್ಟೀಸ್ ಎಂಬ ಪುರಸ್ಕಾರವನ್ನು ಕಾನ್ಫೆಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರೀಸ್(ಸಿಐಐ) ನೀಡಿದೆ’ ಎಂದು ತಿಳಿಸಿದ್ದಾರೆ.