ತೀರ್ಥಹಳ್ಳಿ: ತಾಲೂಕಿನ ಸರ್ಕಾರಿ ಜಯಚಾಮರಾಜೇಂದ್ರ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕ ಮತ್ತು ನವೀಕರಿಸಲ್ಪಟ್ಟ ಶಸ್ತ್ರಚಿಕಿತ್ಸಾ ಕೊಠಡಿಯನ್ನುಮಂಗಳವಾರ ಗೃಹಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ತೀರ್ಥಹಳ್ಳಿಯಲ್ಲಿ ಜನರಿಗೆ ಸಮಸ್ಯೆ ಆಗುತ್ತಿರುವುದು ಎರಡು ವಿಭಾಗದಲ್ಲಿ, ಒಂದು ತಾಲೂಕು ಕಛೇರಿ, ಇನ್ನೊಂದು ಸರ್ಕಾರಿ ಆಸ್ಪತ್ರೆ. ಇವೆರಡೂ ತಮ್ಮ ವಿಶೇಷ ಆದ್ಯತೆಯಾಗಿದೆ. ಹಾಗಾಗಿ ಆಸ್ಪತ್ರೆಗೆ ಮತ್ತು ತಾಲೂಕು ಕಛೇರಿಗೆ ಏನೆಲ್ಲಾ ಸೌಲಭ್ಯಗಳು ಬೇಕೋ ಅದನ್ನೆಲ್ಲ ಮಾಡಿಸುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.
ಸಾರ್ವಜನಿಕ ಆಸ್ಪತ್ರೆಯ ಬಹಳ ದೊಡ್ಡ ಪರಿವರ್ತನೆಗೆ ಹಣ ಬಿಡುಗಡೆ ಮಾಡಿಸುವ ಮತ್ತು ಸಾರ್ವಜನಿಕರ ಸಮಸ್ಯೆ ಪರಿಹರಿಸುವ ಪ್ರಯತ್ನ ನಡೆಯುತ್ತಿದೆ. ಇದೊಂದು ಸಂತೋಷದ ವಿಚಾರ. ಆಸ್ಪತ್ರೆಯ ಸಿಬ್ಬಂದಿಗಳು, ವೈದ್ಯರುಗಳು ಉತ್ತಮವಾಗಿ ಸೇವಾ ಮನೋಭಾವದಿಂದ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಆಸ್ಪತ್ರೆಗೆ ಬೇಕಾದ ಸಲಕರಣೆಗಳು ಮತ್ತು ಉಪಕರಣಗಳು ಅವರ ಕೈ ಬಲಪಡಿಸಲು ಅವಶ್ಯಕವಾಗಿದೆ. ಇತ್ತೀಚಿನ ದಿನಗಳಲ್ಲಿ ಕೋವಿಡ್ ಸಮಯದಲ್ಲಿ ತುಂಬಾ ತೊಂದರೆ ಆಗಿದೆ. ಆಕ್ಸಿಜನ್ ಪ್ಲಾಂಟಿನ ಕಾಮಗಾರಿ ಪ್ರಾರಂಭವಾಗಿದೆ ಎಂದು ಹೇಳಿದರು.