ಮಂಗಳೂರು: ಇತ್ತೀಚೆಗೆ ಮುಸ್ಲಿಂ ವಿದ್ಯಾರ್ಥಿನಿಯರ ಶಿರವಸ್ತ್ರವನ್ನು ವಿವಾದ ಮಾಡಿದ ಮಂಗಳೂರು ವಿಶ್ವವಿದ್ಯಾಲಯದ ಎಬಿವಿಪಿ ಕಾರ್ಯಕರ್ತರು ‘ಭಾರತ ಮಾತಾ ಪೂಜನಾ’ ಎಂಬ ಕಾರ್ಯಕ್ರಮವನ್ನು ಕಾಲೇಜಿನಲ್ಲಿ ಆಯೋಜಿಸಿದ್ದು ವಿವಿ ಕುಲಪತಿಗಳು ಕಾರ್ಯಕ್ರಮಕ್ಕೆ ಅನುಮತಿ ನೀಡಿದರ ಬಗ್ಗೆ ಸಾಮಾಜಿಕ ವಲಯಗಳಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದೆ.
ಹಿಜಾಬ್ ಧಾರ್ಮಿಕ ಸಂಕೇತ. ಹಾಗಾಗಿ ಅದರ ಬಳಕೆಗೆ ಅವಕಾಶವಿಲ್ಲ ಎಂದು ವಿದ್ಯಾರ್ಥಿನಿಯರ ಭವಿಷ್ಯ ಹಾಳುಗೆಡವಿರುವಾಗ ವಿವಿ ಕಾಲೇಜಿನ ಎಬಿವಿಪಿ ಘಟಕದ ಕಾರ್ಯಕರ್ತರಿಗೆ ‘ಭಾರತ ಮಾತಾ ಪೂಜನಾ’ಕಾರ್ಯಕ್ರಮ ಆಯೋಜಿಸಲು ಅನುಮತಿ ನೀಡಿದ್ದು ಎಷ್ಟು ಸರಿ. ಹಿಂದೂ ಸಂಸ್ಕ್ರತಿಯನ್ನು ಹೋಲುವ ಮಹಿಳೆಯ ಕೈಯ್ಯಲ್ಲಿ ಕೇಸರಿ ಧ್ವಜವಿಟ್ಟು ಭಾರತ ಮಾತ ಪೂಜನಾ ಎಂದು ಕಾರ್ಯಕ್ರಮ ಆಯೋಜಿಸುವುದು ಸರಿಯಲ್ಲ. ಇದು ಸಮಾನತೆಯೇ? ದೇಶದ ಸಂವಿಧಾನಕ್ಕೆ ಅಪಚಾರ ಎಸಗುವ ಇಂತಹವರ ವಿರುದ್ಧ ಪೊಲೀಸರ ಕ್ರಮವಿಲ್ಲವೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಹಿಜಾಬ್ ವಿವಾದ ಮಾಡಿದ ಬಳಿಕ ಜೂನ್ 06 ರಂದು ಇದೇ ಎಬಿವಿಪಿ ಕಾರ್ಯಕರ್ತರು ತರಗತಿ ಗೋಡೆಯಲ್ಲಿ ಸಾವರ್ಕರ್ ಚಿತ್ರ ಅಳವಡಿಸಿ ಕಾಲೇಜಿನಲ್ಲಿ ಶಾಂತಿ ಕದಡುವ ಯತ್ನ ನಡೆಸಿದ್ದರು. ಇದೀಗ ಸ್ವಾತಂತ್ರ್ಯೋತ್ಸವ ಆಚಾರದ ನೆಪದಲ್ಲಿ ಹಿಂದೂ ಧಾರ್ಮಿಕ ಆಚಾರದಂತೆ ಕಾರ್ಯಕ್ರಮ ಆಯೋಜಿಸಿರುವುದು ಖಂಡನೀಯ.
ಶಾಂತವಾಗುತ್ತಿರುವ ದ.ಕ. ಜಿಲ್ಲೆಯಲ್ಲಿ ಇಂತಹ ಕಾರ್ಯಕ್ರಮಗಳ ಮೂಲಕ ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿರುವ ಮಂಗಳೂರು ವಿವಿಯ ಎಬಿವಿಪಿ ಗೂಂಡಾಗಳ ಮೇಲೆ ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರ ಕ್ರಮವಿಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ.