ಬೆಂಗಳೂರು: ‘ಲ್ಯಾಂಡ್ ಮಾಡಬೇಡಿ, ಈ ವಿಮಾನದಲ್ಲಿ ಬಾಂಬ್ ಇದೆ’ ಎಂಬ ಬೆದರಿಕೆಯ ಸಂದೇಶವನ್ನು ಬರೆದ ಟಿಶ್ಯೂ ಪೇಪರ್ ಜೈಪುರ-ಬೆಂಗಳೂರು ಇಂಡಿಗೋ ವಿಮಾನದ ಶೌಚಾಯಲಯದಲ್ಲಿ ಪತ್ತೆಯಾಗಿದೆ.
ವಿಮಾನದ ಶೌಚಾಲಯದ ನೆಲದ ಮೇಲೆ ಹರಿದ ಟಿಶ್ಯೂ ಪೇಪರಲ್ಲಿ ಬೆದರಿಕೆ ಸಂದೇಶವಿರುವುದನ್ನು ನೋಡಿದ ಸಿಬ್ಬಂದಿಯೊಬ್ಬರು ಕ್ಯಾಪ್ಟನ್‌ಗೆ ಮಾಹಿತಿ ನೀಡಿದ್ದರು. ಕೂಡಲೇ ಎಚ್ಚೆತ್ತ ಕ್ಯಾಪ್ಟನ್, ಏರ್ ಟ್ರಾಫಿಕ್ ಕಂಟ್ರೋಲ್‌ಗೆ ಎಚ್ಚರಿಕೆ ನೀಡಿದ್ದು, ಅದರಂತೆ ಸಿಐಎಸ್ಎಫ್ ತಂಡ ಕೆಲವೇ ನಿಮಿಷಗಳಲ್ಲಿ ಪರಿಶೀಲನೆಗೆ ಸಜ್ಜಾಯಿತು.
ಮಾಹಿತಿ ಪಡೆದ ಬಾಂಬ್ ನಿಷ್ಕ್ರಿಯ ದಳ ಹಾಗೂ ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ ಇಂಡಿಗೋ ವಿಮಾನದಲ್ಲಿ ಶೋಧ ನಡೆಸಿದ್ದಲ್ಲದೆ ಸುಮಾರು 174 ಪ್ರಯಾಣಿಕರು ಹಾಗೂ ಅವರುಗಳ ಬ್ಯಾಗ್ಗಳನ್ನು ತಪಾಸಣೆ ನಡೆಸಿದರು.
ಮಾತ್ರವಲ್ಲದೆ ಅಷ್ಟೂ ಪ್ರಯಾಣಿಕರ ಮತ್ತು 12 ಸಿಬ್ಬಂದಿಗಳ ಕೈಬರಹ ಪರೀಕ್ಷೆ ನಡೆಸಲಾಯಿತು. ಅವರಲ್ಲಿ ಇಬ್ಬರು ಪ್ರಯಾಣಿಕರನ್ನು ಶಂಕಿತರು ಎಂದು ಗುರುತಿಸಲಾಯಿತು. ಘಟನೆಯಿಂದಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಜೈಪುರದಿಂದ ಇಂಡಿಗೋ ವಿಮಾನ 6ಇ-556 ಭಾನುವಾರ ರಾತ್ರಿ 9.26 ಕ್ಕೆ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿಮಾನದಲ್ಲಿ ಈ ಬೆದರಿಕೆ ಸಂದೇಶ ಪತ್ತೆಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. “ನೀಲಿ ಶಾಯಿಯಲ್ಲಿ ‘ವಿಮಾನವನ್ನು ಲ್ಯಾಂಡ್ ಮಾಡಬೇಡಿ, ಈ ವಿಮಾನದಲ್ಲಿ ಬಾಂಬ್ ಇದೆ’ ಎಂದು ಬರೆದಿರುವ ಟಿಶ್ಯೂ ಪೇಪರ್ ಪತ್ತೆಯಾಗಿರುವುದಾಗಿ ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಅನೂಪ್ ಎ ಶೆಟ್ಟಿ ಹೇಳಿದ್ದಾರೆ. ಬೆದರಿಕೆ ಸಂಬಂಧ ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ತಿಳಿಸಿದ್ದಾರೆ.