ಬಿಹಾರ ರಾಜಕೀಯ ಬಿಕ್ಕಟ್ಟು: ಮಹತ್ವದ ಸಭೆ ಕರೆದ ಸಿಎಂ ನಿತೀಶ್ ಕುಮಾರ್

Prasthutha|

ಪಟ್ನಾ: ಜೆಡಿ(ಯು) ಪಕ್ಷಕ್ಕೆ ಆರ್.ಸಿ.ಪಿ. ಸಿಂಗ್ ರಾಜೀನಾಮೆ ಸಲ್ಲಿಸಿದ ಬಳಿಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಂಗಳವಾರ ಸಂಸದರು, ಶಾಸಕರ ಮಹತ್ವದ ಸಭೆ ಕರೆದಿದ್ದಾರೆ.

- Advertisement -


ಬಿಹಾರದಲ್ಲಿ ಜೆಡಿ(ಯು) ಮತ್ತು ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರದಲ್ಲಿದೆ. ಸದ್ಯ ಉಭಯ ಪಕ್ಷಗಳ ನಡುವೆ ಶೀತಲ ಸಮರ ನಡೆಯುತ್ತಿದೆ ಎಂದು ರಾಜಕೀಯ ವಿಶ್ಲೇಷಕರು ತಿಳಿಸಿದ್ದಾರೆ.


ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಗೆ ಮುಖ್ಯಮಂತ್ರಿ ನಿತೀಶ್ ಕುಮಾರ್ ಗೈರಾಗಿದ್ದು, ಎರಡು ಎನ್ ಡಿಎ ಮಿತ್ರಪಕ್ಷಗಳು ವಿಭಜನೆಯತ್ತ ಸಾಗಬಹುದು ಎಂಬ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.

- Advertisement -


ಸದ್ಯ ಜೆಡಿ(ಯು) ಕೇಂದ್ರ ಸರ್ಕಾರದ ಸಚಿವ ಸಂಪುಟದಿಂದ ಹೊರಗಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕೇಂದ್ರ ಸರ್ಕಾರಕ್ಕೆ ಅಗತ್ಯ ಸಹಕಾರ ನೀಡುತ್ತಿಲ್ಲ ಎಂದು ಬಿಹಾರ ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮಿತ್ರಪಕ್ಷಗಳಿಗೆ ಸರಿಯಾದ ಪ್ರಾತಿನಿಧ್ಯ ನೀಡದೆ ಕಡೆಗಣಿಸಲಾಗುತ್ತಿದೆ ಎಂದು ಜೆಡಿಯು ನಾಯಕರು ಅಸಮಾಧಾನ ಹೊರ ಹಾಕಿದ್ದಾರೆ.

ಬಿಹಾರದ ಜೆಡಿಯು ಮತ್ತು ಬಿಜೆಪಿ ಹಾಗೂ ಇತರ ಸಣ್ಣ ಪಕ್ಷಗಳ ನಡುವೆ ಬಿರುಕು ವಿಸ್ತಾರವಾಗಿದ್ದು, ಪಾಟ್ನಾದಲ್ಲಿ ಜೆಡಿಯು ಶಾಸಕರು ಆಗಸ್ಟ್ 8ರ ಸೋಮವಾರದಂದು ಪ್ರತ್ಯೇಕ ಸಮಾಲೋಚನಾ ಸಭೆ ನಡೆಸಿದ್ದಾರೆ. ಇದೇ ವೇಳೆ ಎನ್ ಡಿಎ ಮೈತ್ರಿ ಸರಕಾರದ ಇನ್ನೊಂದು ಅಂಗ ಪಕ್ಷವಾದ ಜಾತ್ಯತೀತ ಹಿಂದೂಸ್ತಾನ್ ಅವಾಮ್ ಮೋರ್ಚಾದ ಶಾಸಕರು ಸಹ ಪ್ರತ್ಯೇಕ ಸಮಾಲೋಚನಾ ಸಭೆಯನ್ನು ಇಂದೇ ನಡೆಸಿದ್ದಾರೆ.

ಈ ಸಭೆಗೆ ಮೊದಲು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರಿಗೆ ಕರೆ ಮಾಡಿ ಮಾತನಾಡಿದರು ಎನ್ನುವುದಕ್ಕೆ ವಿಶೇಷ ಮಹತ್ವ ಬಂದಿದೆ.

ಬಿಜೆಪಿಯು ನಿತೀಶ್ ಸರಕಾರದ ವಿರುದ್ಧ ಸಂಚು ನಡೆಸುತ್ತಿರುವುದಾಗಿ ಭಾನುವಾರ ಆಪಾದಿಸಲಾಗಿದೆ. ಆದರೆ ಮುಂದಿನ ಚುನಾವಣೆಯಲ್ಲಿ ಯಾವ ಪಕ್ಷಗಳು ಮೈತ್ರಿ ಮಾಡಿಕೊಂಡು ಸ್ಪರ್ಧಿಸುತ್ತವೆ ಎನ್ನುವ ಬಗ್ಗೆ ಯಾವುದೇ ಅಂತಿಮ ನಿರ್ಧಾರವಾಗಲಿ ಮಾತುಕತೆಯಾಗಲಿ ಆಗಿಲ್ಲ.

ಭಾನುವಾರ ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಸಭೆಗೂ ನಿತೀಶ್ ಕುಮಾರ್ ಹಾಜರಾಗದೆ ದೂರ ಉಳಿದರು.

ಇಂದಿನ ತಾತ್ಕಾಲಿಕ ಮಾತುಕತೆಯೊಂದಿಗೆ ಆಗಸ್ಟ್ 9ರ ಮಂಗಳವಾರ ಜೆಡಿಯುನ 45 ಶಾಸಕರೂ ಮುಖ್ಯಮಂತ್ರಿ ನಿತೀಶ್ ನಿವಾಸದಲ್ಲಿ ಸೇರಲು ತೀರ್ಮಾನಿಸಿದ್ದಾರೆ. ಮಂಗಳವಾರ ಆರ್ ಜೆಡಿ- ರಾಷ್ಟ್ರೀಯ ಜನತಾ ದಳದ ನಾಯಕರಾದ ತೇಜಸ್ವಿ ಯಾದವ್ ಸಹ ತಮ್ಮ ಶಾಸಕರ ಸಭೆ ಕರೆದಿದ್ದು. ಆ ಪಕ್ಷದ 79 ಶಾಸಕರು ಅದರಲ್ಲಿ ಹಾಜರಿರುವರು. ಹಲವರು ಇಂದೇ ಪಾಟ್ನಾ ಸೇರಿದ್ದಾರೆ.

ಜೆಡಿಯು ಮತ್ತು ಆರ್ ಜೆಡಿಗಳು ಮತ್ತೆ ಮೈತ್ರಿಗೆ ಬರುವ ಸೂಚನೆಗಳು ಇರುವುದಾಗಿ ಹೇಳಲಾಗಿದೆ. ಮುಖ್ಯಮಂತ್ರಿ ನಿತೀಶ್ ಅವರ ಇಫ್ತಾರ್ ಪಾರ್ಟಿಯಲ್ಲಿ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಭಾಗವಹಿಸಿದ ಬಳಿಕ ಎರಡೂ ಪಕ್ಷಗಳಾಗಲಿ, ನಾಯಕರಾಗಲಿ ಪರಸ್ಪರ ಟೀಕಿಸಿಕೊಂಡಿಲ್ಲ.

ಭಾನುವಾರ ತೇಜಸ್ವಿ ಯಾದವ್ ನಾಯಕತ್ವದಲ್ಲಿ ಹಣದುಬ್ಬರ, ಬೆಲೆಯೇರಿಕೆ ಬಗ್ಗೆ ಪಾಟ್ನಾದಲ್ಲಿ ಭಾರೀ ಪ್ರತಿಭಟನೆ ನಡೆಯಿತು. ಅವರಿಗೆ ಆ ಹಕ್ಕು ಇದೆ ಎಂದು ಜೆಡಿಯು ನಾಯಕರು ಹೇಳಿದ್ದಾರೆ.

ಆರ್. ಸಿ. ಪಿ. ಸಿಂಗ್ ಪ್ರಕರಣದಿಂದಾಗಿ ಪಕ್ಷವು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದು ಕೇಂದ್ರ ಸಂಪುಟದಲ್ಲಿ ತನ್ನವರನ್ನು ಮತ್ತೆ ಸೇರಿಸುವ ಬಗ್ಗೆ ಪಕ್ಷ ಸಿದ್ಧವಾಗಿಲ್ಲ ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಲಲನ್ ಸಿಂಗ್ ನಿನ್ನೆ ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಕಳೆದ ಎರಡು ತಿಂಗಳುಗಳಿಂದ ಜೆಡಿಯು ಮತ್ತು ಬಿಜೆಪಿ ನಡುವೆ ಉದ್ವಿಗ್ನ ಬಿಗು ವಾತಾವರಣ ಮುಂದುವರಿದಿದೆ. ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಜೆಡಿಯು ಕೇಳಿದ್ದನ್ನು ಬಿಜೆಪಿ ತಿರಸ್ಕರಿಸಿದ ಬಿಸಿಯೂ ಆರಿಲ್ಲ.

ವಿಧಾನ ಸಭಾ ಸ್ಪೀಕರ್ ಬಿಜೆಪಿಯವರಾಗಿದ್ದು ಅವರು ವಿಧಾನ ಸಭಾ ಶತಮಾನೋತ್ಸವದ ಬಗ್ಗೆ ನಡೆಸಿದ ಕಾರ್ಯಕ್ರಮದ ಅತಿಥಿಗಳಲ್ಲಿ ನಿತೀಶ್ ಕುಮಾರ್ ಹೆಸರು ಇರಲಿಲ್ಲ. ಇದೂ ಜೆಡಿಯು ಮನಸ್ಸು ಕೊರೆಯುತ್ತಿದೆ.

ಪಾಟ್ನಾದಲ್ಲಿ ಬಿಜೆಪಿಯ ಎರಡು ದಿನಗಳ ರಾಷ್ಟ್ರೀಯ ಸಮಾವೇಶ ನಡೆಯಿತು. ಯಾವ ರೀತಿಯಲ್ಲೂ ಜೆಡಿಯು ಅಲ್ಲಿ ಸಂಪರ್ಕ ಹೊಂದಿರಲು ಅವಕಾಶ ನೀಡಲಾಗಿಲ್ಲ. ಆದರೆ ಅದರಲ್ಲಿ ಬಿಜೆಪಿಯು 2024ರ ಲೋಕ ಸಭೆ ಮತ್ತು 2025ರ ವಿಧಾನ ಸಭೆ ಚುನಾವಣೆಗಳನ್ನು ಜೆಡಿಯು ಮೈತ್ರಿಯಲ್ಲಿ ಎದುರಿಸುವುದಾಗಿ ಹೇಳಿತು, ತನ್ನ ಮಟ್ಟಿಗಿನ ತೀರ್ಮಾನವನ್ನೂ ತೆಗೆದುಕೊಂಡಿದೆ.

ಬಿಜೆಪಿಯು ಜೆಡಿಯುನ ಆರ್. ಸಿ. ಪಿ. ಸಿಂಗ್ ಅವರನ್ನು ಮಹಾರಾಷ್ಟ್ರದಲ್ಲಿ ಏಕನಾಥ ಶಿಂಧೆಯವರನ್ನು ಬಳಸಿಕೊಂಡ ರೀತಿಯಲ್ಲಿ ಬಳಸಿಕೊಳ್ಳಲು ನೋಡುತ್ತಿದೆ ಎಂಬ ಗುಮಾನಿ ಜೆಡಿಯುವಿಗಿದೆ. ಒಂದು ಕಾಲದಲ್ಲಿ ನಿತೀಶ್ ಅವರ ನಂಬರ್ ಟೂ ಆಗಿದ್ದ ಆರ್. ಸಿ ಪಿ. ಸಿಂಗ್ ರಾಜ್ಯ ಜೆಡಿಯು ಗಮನಕ್ಕೆ ತಾರದೆಯೇ ಮೋದಿಯವರ ಸಂಪುಟ ಸೇರಿದ್ದರು. ಆಮೇಲೆ ಅವರನ್ನು ಜೆಡಿಯು ಪಕ್ಷದಿಂದಲೇ ಉಚ್ಚಾಟಿಸಿದೆ. 2013 ಮತ್ತು 2022ರ ನಡುವೆ ಅವರ ಕುಟುಂಬವು 47 ಸೈಟುಗಳನ್ನು ವಶೀಲಿಬಾಜಿಯಿಂದ ಖರೀದಿಸಿದೆ ಎಂಬ ಆಪಾದನೆಯ ಬೆನ್ನಿಗೆ ಆರ್. ಸಿ. ಪಿ. ಸಿಂಗ್ ಜೆಡಿಯುಗೆ ಅವರೂ ಶನಿವಾರ ರಾಜೀನಾಮೆ ನೀಡಿದ್ದಾರೆ.

ಜೆಡಿಯು ಈಗ ಬಿಜೆಪಿ ಮೈತ್ರಿಯಿಂದ ಹೊರ ಬರಬೇಕು ಎನ್ನುವಾಗ ರಾಜ್ಯಪಾಲರು ಹೇಗೆ ವರ್ತಿಸುತ್ತಾರೆ, ನೇರ ಬಿಜೆಪಿಯವರೇ ಆದ ಸ್ಪೀಕರ್ ಹೇಗೆ ರಾಜಕೀಯ ಮಾಡುತ್ತಾರೆ ಎನ್ನುವುದೆಲ್ಲ ಈಗ ದೊಡ್ಡ ಯಕ್ಷ ಪ್ರಶ್ನೆಯಾಗಿದೆ. ಸ್ಪೀಕರ್ ವಿಜಯಕುಮಾರ್ ಸಿನ್ಹಾ ಸದ್ಯ ಕೋವಿಡ್ ಬಾಧಿತರಾಗಿದ್ದಾರೆ. 



Join Whatsapp