ದಾವಣಗೆರೆ: ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ನಾಯಕ ಸಿದ್ದರಾಮಯ್ಯ ಅವರ 75ನೇ ಜನ್ಮ ದಿನದ ಅಂಗವಾಗಿ ಅವರ ಅಭಿಮಾನಿಗಳು ದಾವಣಗೆರೆಯಲ್ಲಿ ಅಮೃತ ಮಹೋತ್ಸವ ಸಮಾರಂಭವನ್ನು ಆಯೋಜಿಸಿದ್ದು, ಕಾರ್ಯಕ್ರಮ ಆರಂಭಕ್ಕೂ ಮುನ್ನ ಮೂರು ಲಕ್ಷಕ್ಕೂ ಹೆಚ್ಚು ಜನರು ನೆರೆದಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4 ಸಂಪೂರ್ಣ ಜಾಮ್ ಆಗಿದೆ..
ಬೆಳಗ್ಗೆ 7ಗಂಟೆಯಿಂದಲೇ ಟ್ರಾಫಿಕ್ ಜಾಮ್ ಆಗಲು ಆರಂಭವಾಗಿದ್ದು, , ಸುಮಾರು 4 ಕಿ.ಮೀ. ದೂರದವರೆಗೂ ವಾಹನ ಜಮಾವಣೆ ಆಗಿತ್ತು. 9 ಗಂಟೆ ವೇಳೆಗೆ ಸುಮಾರು 15 ಕಿಲೋಮೀಟರ್ ವರೆಗೂ ವಾಹನ ಸಂದಣಿಯಿತ್ತು. ವೇದಿಕೆಗೆ 4-5 ಕಿಲೋ ಮೀಟರ್ ಇರುವಂತೆಯೇ ಜನರು ವಾಹನ ಇಳಿದು, ನಡೆದುಕೊಂಡೇ ಹೋಗುತ್ತಿರುವ ದೃಶ್ಯ ಕಂಡುಬಂತು.
ರಾಜ್ಯದ ಎಲ್ಲ ವಿಧಾನ ಸಭಾ ಕ್ಷೇತ್ರದಿಂದಲೂ ಜನರು ಆಗಮಿಸುತ್ತಿದ್ದು, ಸುಮಾರು ಎಂಟು ಸಾವಿರಕ್ಕೂ ಹೆಚ್ಚು ಬಸ್ ವ್ಯವಸ್ಥೆ ಮಾಡಲಾಗಿದೆ. ಕಾರುಗಳು, ದ್ವಿಚಕ್ರ ವಾಹನಗಳು ಸೇರಿದಂತೆ ವಿವಿಧ ವಾಹನಗಳ ಮೂಲಕ ವಿವಿಧೆಡೆಯಿಂದ ಜನರು ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಾರೆ. ಐದು ಲಕ್ಷಕ್ಕಿಂತ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.