ಬೆಂಗಳೂರು: ಬಡ ಕುಟುಂಬಗಳ ಯುವಕರನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲಾಗುತ್ತಿದೆ. ಎರಡೂ ರಾಷ್ಟ್ರೀಯ ಪಕ್ಷಗಳೂ ಕ್ರಿಯಾಶೀಲ ಯುವಕರ ಭವಿಷ್ಯಕ್ಕೆ ಕೊಳ್ಳಿ ಇಡುತ್ತಿವೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕರಾವಳಿಯಲ್ಲಿ ನಡೆದ ತ್ರಿವಳಿ ಕೊಲೆಗಳ ಗುಟ್ಟನ್ನು ಬೇಧಿಸಿ ನೈಜ ಹಂತಕರನ್ನು ಹಿಡಿಯುವ ಬದಲು ರಾಜ್ಯ ಬಿಜೆಪಿ ಸರಕಾರವು, ತಾನೇ ಮುಂದೆ ನಿಂತು ದಿನಕ್ಕೊಂದು ಕಥೆ ಕಟ್ಟುತ್ತಿದೆ. ಕ್ಷಣಕ್ಕೊಂದು ಟ್ವಿಸ್ಟ್ ಕೊಡುತ್ತಾ, ಜನರಿಗೆ ಸತ್ಯ ತಿಳಿಸುತ್ತಿಲ್ಲ ಎಂದು ಹೇಳಿದ್ದಾರೆ.
ಮಂಗಳೂರಿನಲ್ಲಿ ನಿನ್ನೆ ಹೇಳಿದಂತೆ, ಅಗಸ್ಟ್ 5ರೊಳಗೆ ನೈಜ ಕೊಲೆಗೆಡುಕರನ್ನು ಬಂಧಿಸದಿದ್ದರೆ ನಾನು ಶಾಂತಿಯುತ ಸತ್ಯಾಗ್ರಹ ಕೂರಲು ಶತಃಸಿದ್ಧ. ನನ್ನದು ಗಾಂಧೀ ಮಾರ್ಗ. ಅಧಿಕಾರಕ್ಕಾಗಿ ವಾಮಮಾರ್ಗ ಹಿಡಿಯುವ ಪಕ್ಷಕ್ಕೆ ನೆತ್ತರ ದಾರಿಯೇ ರಾಜಮಾರ್ಗ ಎನ್ನುವುದು ಕರಾವಳಿ ಜನರು ಅರ್ಥ ಮಾಡಿಕೊಂಡಿದ್ದಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯ ಬಿಜೆಪಿ ಸರಕಾರದ ಪಕ್ಷಪಾತ ನೀತಿ ಕಣ್ಣಿಗೆ ರಾಚುವಂತಿದೆ. ಇದು ಅತ್ಯಂತ ಮಾರಕ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಡವಳಿಕೆಯನ್ನು ಯಾರೂ ಒಪ್ಪುವುದಿಲ್ಲ. ಈಗೇನೋ ಜ್ಞಾನೋದಯವಾಗಿ ಮಸೂದ್ ಮತ್ತು ಫಾಝಿಲ್ ಮನೆಗೂ ಭೇಟಿ ನೀಡುವುದಾಗಿ ಹೇಳಿದ್ದಾರೆ’ ಎಂದು ವ್ಯಂಗ್ಯವಾಡಿದ್ದಾರೆ.