ಚಾಮರಾಜನಗರ: ಕಳ್ಳಬೇಟೆಗಾರರನ್ನು ಪತ್ತೆ ಮಾಡುವಲ್ಲಿ ನಿಪುಣನಾಗಿದ್ದು, ಅವರಿಗೆ ಸಿಂಹಸ್ವಪ್ನವಾಗಿದ್ದ ಶ್ವಾನ ‘ರಾಣಾ’ ಮಂಗಳವಾರ ಬೆಳಗ್ಗೆ ಕೊನೆಯುಸಿರೆಳೆದಿದೆ.
ರಾಣಾಗೆ ಹತ್ತು ವರ್ಷ ವಯಸ್ಸಾಗಿತ್ತು. ವಯೋಸಹಜವಾಗಿ ಜೀವನ ಮುಗಿಸಿದೆ.
ಬಂಡೀಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಅರಣ್ಯ ಅಪರಾಧ ವಿಭಾಗದಲ್ಲಿದ್ದ , ಜರ್ಮನ್ ಶಫರ್ಡ್ ತಳಿಯ ನಾಯಿ ರಾಣಾ ಹಲವು ಅರಣ್ಯ ಅಪರಾಧಗಳನ್ನು ಪತ್ತೆ ಹಚ್ಚಿ ಕಳ್ಳಬೇಟೆಗಾರರಿಗೆ ಸಿಂಹ ಸ್ವಪ್ನವಾಗಿತ್ತು.
ವಯಸ್ಸಾದ ಕಾರಣ ರಾಣಾಗೆ ನಿವೃತ್ತಿ ಕೊಡಲು ಅರಣ್ಯ ಇಲಾಖೆ ಚಿಂತನೆ ನಡೆಸುತ್ತಿರುವಾಗಲೇ ಅನಾರೋಗ್ಯಕ್ಕೀಡಾದ ರಾಣಾಗೆ ಸೋಮವಾರ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಮರುದಿನವೇ ಅಂದರೆ, ಇಂದು ಬೆಳಗ್ಗೆ ರಾಣಾ ಕೊನೆಯುಸಿರೆಳೆದಿದೆ.
ತನ್ನ ಸಾಹಸಗಳಿಂದಲೇ ಅಭಿಮಾನಿಗಳನ್ನು ಸೃಷ್ಟಿಸಿಕೊಂಡಿದ್ದ ಹಂಟರ್ ರಾಣಾ ಹುಲಿ ಕೊಂದವರು, ಮರ ಕಡಿದವರು, ಹುಲಿ ಸೆರೆ ಕಾರ್ಯಾಚರಣೆಯಲ್ಲೂ ಪರಾಕ್ರಮ ತೋರಿತ್ತು.
ಬಂಡೀಪುರ ಸಫಾರಿ ಕೌಂಟರ್ ಸಮೀಪ ರಾಣಾ ಬಾಡಿಯಿದ್ದು, ಗೌರವ ಸಮರ್ಪಿಸಿ ಅಂತ್ಯಕ್ರಿಯೆಗೆ ತೀರ್ಮಾನ ಮಾಡಲಾಗಿದೆ.