ಲಕ್ನೋ: ಅಗತ್ಯವಸ್ತುಗಳ ಬೆಲೆಯೇರಿಕೆಯನ್ನು ಖಂಡಿಸಿ 1ನೇ ತರಗತಿಯ ಪುಟ್ಟ ಬಾಲಕಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾಳೆ ಎನ್ನಲಾಗುತ್ತಿರುವ ಪತ್ರವೊಂದು ಸಾಮಾಜಿಕ ತಾಣಗಳಲ್ಲಿ ಭಾರೀ ವೈರಲ್ ಆಗಿದೆ.
ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಛಿಬ್ರಮೌ ಪಟ್ಟಣದ ನಿವಾಸಿಯಾದ ಕೃತಿ ದುಬೆ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ಹಿಂದಿಯಲ್ಲಿ ಬರೆದಿರುವ ಪತ್ರದಲ್ಲಿ, ನಮಸ್ಕಾರ ಮೋದಿಜೀ, ನೀವು ನಿರಂತರ ಬೆಲೆ ಏರಿಕೆಗೆ ಕಾರಣರಾಗಿದ್ದೀರಿ. ನನ್ನ ಕಲಿಕೆಗೆ ಅಗತ್ಯವಿರುವ ಪೆನ್ಸಿಲ್, ರಬ್ಬರ್ ಬೆಲೆ ಹೆಚ್ಚಾಗಿದೆ. ನನಗೆ ಇಷ್ಟವಾದ ಮ್ಯಾಗಿಯ ಬೆಲೆಯೂ ದುಬಾರಿಯಾಗಿದೆ. ತಾಯಿಯ ಬಳಿ ಪೆನ್ಸಿಲ್, ರಬ್ಬರ್ ಕೇಳಿದರೆ ನನ್ನಲ್ಲಿ ಸಿಟ್ಟಾಗುತ್ತಾಳೆ. ನಾನೇನು ಮಾಡಲಿ ಎಂದು ಪ್ರಶ್ನಿಸಿದ್ದಾಳೆ.
ಈ ಬಗ್ಗೆ ಮಾತನಾಡಿರು ಬಾಲಕಿಯ ತಂದೆ ವಿಶಾಲ್ ದುಬೆ, ‘ಈ ಪತ್ರ ನನ್ನ ಮಗಳ ಮನ್ ಕಿ ಬಾತ್. ಇತ್ತೀಚೆಗೆ ಶಾಲೆಯಲ್ಲಿ ಪೆನ್ಸಿಲ್ ಕಾಣೆಯಾಗಿದ್ದಕ್ಕೆ ಆಕೆಯ ತಾಯಿ ಗದರಿಸಿದಾಗ ಆಕೆಗೆ ಕೋಪ ಬಂದು, ಅದನ್ನೇ ಮನಸ್ಸಿನಲ್ಲಿಟ್ಟುಕೊಂಡು ಪತ್ರ ಬರೆದಿದ್ದಾಳೆ ಎಂದು ಹೇಳಿದ್ದಾರೆ.
ಬಾಲಕಿ ಬರೆದ ಪತ್ರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇದು ಅಲ್ಲಿನ ಶಿಕ್ಷಣಾಧಿಕಾರಿಗಳ ಗಮನಕ್ಕೆ ಬಂದು, ಮಗುವಿಗೆ ಸಹಾಯ ಮಾಡಲು ನಾವು ಸಿದ್ಧ ಎಂದು ಹೇಳಿದ್ದಾರೆ.