ಬೆಂಗಳೂರು: ಯುವತಿಯರನ್ನು ಕೆಲಸ ಕೊಡಿಸುವ ನೆಪದಲ್ಲಿ ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಬಟ್ಟೆ ತೆಗೆಸಿ ಅರೆನಗ್ನ ದೃಶ್ಯ ಚಿತ್ರೀಕರಿಸಿ, ಸುಲಿಗೆ ನಡೆಸುತ್ತಿದ್ದ ನಾಲ್ವರು ಆರೋಪಿಗಳನ್ನು ಮಹಾಲಕ್ಷ್ಮಿಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಚಿಕ್ಕಗೊಲ್ಲರಹಟ್ಟಿಯ ನಿವಾಸಿಗಳಾದ ರವಿ, ಮಂಗಳಾ, ಶ್ರೀನಿವಾಸ್ ಹಾಗೂ ಶಿವಕುಮಾರ ಎಂದು ಗುರುತಿಸಲಾಗಿದೆ.
ನಗರದ ವಿವಿಧ ಬಡಾವಣೆಗಳಲ್ಲಿ ನಿರುದ್ಯೋಗಿ ಮಹಿಳೆಯರನ್ನು ಪತ್ತೆಹಚ್ಚಿ ಕೆಲಸ ಕೊಡಿಸುವ ನಾಟಕವಾಡುತ್ತಿದ್ದ ಈ ತಂಡವು ಕಂಪನಿಗೆ ಸಂಬಂಧಿಸಿದ ಮುಖ್ಯಸ್ಥರನ್ನು ಭೇಟಿ ಮಾಡಿಸುವ ನೆಪದಲ್ಲಿ ಮಹಿಳೆಯರು, ಯುವತಿಯರನ್ನು ನಿರ್ಜನ ಪ್ರದೇಶಗಳಿಗೆ ಕರೆದೊಯ್ದು ಅಲ್ಲಿ ಅವರನ್ನು ಅರೆ ನಗ್ನಗೊಳಿಸಿ ವಿಡಿಯೊ ಚಿತ್ರೀಕರಿಸಿ, ಹಣ ನೀಡದಿದ್ದರೆ ಸಾಮಾಜಿಕ ಮಾಧ್ಯಮಕ್ಕೆ ವೀಡಿಯೋ ಹರಿಯಬಿಡುವ ಬೆದರಿಕೆ ಒಡ್ಡುತ್ತಿದ್ದರು’ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳಿಂದ ₹1.2 ಲಕ್ಷದ ಚಿನ್ನಾಭರಣ, ₹70 ಸಾವಿರ ನಗದು, ಎ.ಟಿ.ಎಂ ಕಾರ್ಡ್ 1, ಕಾರು, ಮೂರು ಮೊಬೈಲ್, ಚಾಕು, ಕಬ್ಬಿಣದ ಪೈಪ್, ಬ್ಯಾಟ್ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.