ನವದೆಹಲಿ: ಶಿಕ್ಷಕರ ನೇಮಕಾತಿ ಹಗರಣದಲ್ಲಿ ಮಾಜಿ ರಾಜ್ಯ ಸಚಿವ ಪಾರ್ಥ ಚಟರ್ಜಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಪಶ್ಚಿಮ ಬಂಗಾಳದ ಬಿಜೆಪಿ ಸಂಸದರು ಸಂಸತ್ತಿನ ಮುಂಗಾರು ಅಧಿವೇಶನದ ನಡುವೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ವಿರುದ್ಧ ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ಮಮತಾ ಬ್ಯಾನರ್ಜಿ ಮತ್ತು ಟಿಎಂಸಿ ವಿರುದ್ಧ ಘೋಷಣೆಗಳನ್ನು ಕೂಗಿದರು.
ಶಿಕ್ಷಕರ ನೇಮಕಾತಿ ಹಗರಣದ ತನಿಖೆಗಾಗಿ ಜುಲೈ 23 ರಂದು ತೃಣಮೂಲ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ಪಾರ್ಥ ಚಟರ್ಜಿ ಅವರನ್ನು ಇಡಿ ಬಂಧಿಸಿತ್ತು.
ಈ ಮಧ್ಯೆ ಜಾರಿ ನಿರ್ದೇಶನಾಲಯವು, ಕೋಲ್ಕತಾದಲ್ಲಿರುವ ಪಾರ್ಥ ಚಟರ್ಜಿ ಅವರ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಮನೆಗಳಿಂದ ರಾಶಿ ರಾಶಿ ನಗದು ಮತ್ತು ಕಿಲೋಗಟ್ಟಲೆ ಚಿನ್ನವನ್ನು ವಶಪಡಿಸಿಕೊಂಡಿತ್ತು. ಇದಾದ ಕೆಲವು ದಿನಗಳ ನಂತರ, ಚಟರ್ಜಿ ಈ ಹಣವು ತನಗೆ ಸೇರಿದ್ದಲ್ಲ ಎಂದು ಹೇಳಿದ್ದಾರೆ.