ಮುಂಬೈ: ಜಾರಿ ನಿರ್ದೇಶನಾಲಯ (ಇಡಿ) ತಂಡವು ಮುಂಬೈನ ಶಿವಸೇನೆಯ ರಾಜ್ಯಸಭಾ ಸಂಸದ ಸಂಜಯ್ ರಾವತ್ ಅವರ ನಿವಾಸದ ಮೇಲೆ ದಾಳಿ ಮಾಡಿದೆ ಮತ್ತು ಸಂಜಯ್ ರಾವತ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಳ್ಳು ಸಾಧ್ಯತೆಯಿದೆ.
ಪತ್ರಾ ಚಾಲ್ ಭೂ ಹಗರಣಕ್ಕೆ ಸಂಬಂಧಿಸಿದಂತೆ ಶಿವಸೇನೆ ನಾಯಕ ಸಂಜಯ್ ರಾವತ್ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸುತ್ತಿದೆ. ಸಂಜಯ್ ರಾವತ್ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. 1034 ಕೋಟಿ ರೂ.ಗಳ ಪತ್ರಾ ಚಾಲ್ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಂಜಯ್ ರಾವತ್ ವಿರುದ್ಧ ತನಿಖೆ ನಡೆಯುತ್ತಿದೆ. ಇ.ಡಿ ಅವರಿಗೆ ಹಲವಾರು ಬಾರಿ ಸಮನ್ಸ್ ಜಾರಿ ಮಾಡಿದೆ. ಆದರೆ ಹಲವು ಕಾರಣ ನೀಡಿ ಅವರು ಇಡಿ ವಿಚಾರಣೆಗೆ ಹಾಜರಾಗುತ್ತಿರಲಿಲ್ಲ.
ಉಪರಾಷ್ಟ್ರಪತಿ ಚುನಾವಣೆಗೆ ನಡೆಯುತ್ತಿರುವ ಪ್ರಚಾರವನ್ನು ಉಲ್ಲೇಖಿಸಿ, ಇಡಿ ಮುಂದೆ ಹಾಜರಾಗಲು ಸಂಜಯ್ ಹೆಚ್ಚಿನ ಸಮಯವನ್ನು ಕೋರಿದ್ದರು. ಶಿವಸೇನೆ ಸಂಸದ ಸಂಜಯ್ ರಾವತ್ ಅವರದ್ದು ಎನ್ನಲಾಗುವ ಆಡಿಯೊ ಕ್ಲಿಪ್ ಒಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ರಾಜ್ಯ ಸರ್ಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದು, ಈ ಕ್ಲಿಪ್ ಬಗ್ಗೆ ತನಿಖೆ ನಡೆಸುವಂತೆ ಮಹಾರಾಷ್ಟ್ರ ಸರ್ಕಾರ ಪೊಲೀಸ್ ಇಲಾಖೆಗೆ ಆದೇಶಿಸಿದೆ.
ಪತ್ರಾ ಚಾಲ್ ಪ್ರಕರಣದಲ್ಲಿ ಮತ್ತು ಈ ಕ್ಲಿಪ್ ಗೆ ಸಂಬಂಧಿಸಿದಂತೆ, ಸಂತ್ರಸ್ತ ಮಹಿಳೆ ಇಡಿಗೆ ದೂರು ನೀಡಿದ್ದಾರೆ. ಈ ಕ್ಲಿಪ್ ನಲ್ಲಿ, ಸಂಜಯ್ ರಾವತ್ ಅವರು ಜಮೀನಿನ ಹೆಸರಿಗೆ ಸಂಬಂಧಿಸಿದಂತೆ ಸಂಬಂಧಪಟ್ಟ ಮಹಿಳೆಗೆ ಬೆದರಿಕೆ ಹಾಕುತ್ತಿದ್ದಾರೆ ಮತ್ತು ಅವಳನ್ನು ನಿಂದಿಸುತ್ತಿದ್ದಾರೆ. ಆಡಿಯೋ ಕ್ಲಿಪ್ ಗೆ ಸಂಬಂಧಿಸಿದಂತೆ, ಶಿವಸೇನಾ ಸಂಸದ ಸಂಜಯ್ ರಾವತ್ ಅವರು ಭೂಮಿಗಾಗಿ ತನ್ನನ್ನು ಬೆದರಿಸಿ ನಿಂದಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.