ಕಲ್ಲಾಪು: ನಿರಂತರವಾಗಿ ಸುರಿಯುತ್ತಿರುವ ಗುಡುಗು ಸಹಿತ ಭಾರೀ ಮಳೆಗೆ ಮಂಗಳೂರಿನ ಹೊರ ವಲಯದ ತೊಕೊಟ್ಟು ಸಮೀಪದ ಕಲ್ಲಾಪುವಿನ ಹಲವು ರಸ್ತೆ ಮತ್ತು ಮನೆಗಳಿಗೆ ನೀರು ನುಗ್ಗಿದ್ದು, ಜನರು ಪರದಾಡುವಂತಾಗಿದೆ.
ಅವೈಜ್ಞಾನಿಕ ರಸ್ತೆ ಕಾಮಗಾರಿ ಮತ್ತು ನೀರು ಹರಿಯಲು ಚರಂಡಿ ನಿರ್ಮಿಸದ ಕಾರಣ ಮಳೆ ನೀರು ರಸ್ತೆ ಮತ್ತು ಮನೆಗಳಿಗೆ ನುಗ್ಗಿದೆ. ಇದರಿಂದಾಗಿ ಮನೆಗಳ ಹಲವು ಸಾಮಾಗ್ರಿಗಳು ನಾಶವಾಗಿದ್ದು, ಜನರ ಬವಣೆ ಹೇಳತೀರದ್ದಾಗಿದೆ.
ಪ್ರತಿ ಸಲ ಮಳೆಗಾಲ ಪ್ರಾರಂಭವಾದಾಗ ಮಳೆ ನೀರು ಮನೆಗಳಿಗೆ ನೀರು ನುಗ್ಗುವುದು ಇಲ್ಲಿ ಸಾಮಾನ್ಯ ಎಂಬಂತಾಗಿದೆ. ಜನರ ಸಂಕಷ್ಟ ಕೇಳುವವರಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಈ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.