ಮಂಗಳೂರಿನಲ್ಲಿ ಇಳಿಯಬೇಕಿದ್ದ ಏರ್ ಇಂಡಿಯಾ ವಿಮಾನ ಬೆಂಗಳೂರಿಗೆ: ಪರದಾಡಿದ ಪ್ರಯಾಣಿಕರು

Prasthutha|

ಮಂಗಳೂರು: ದುಬೈ, ಅಬುಧಾಬಿ – ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ ಎರಡು ಏರ್ ಇಂಡಿಯಾ ಎಕ್ಸ್’ಪ್ರೆಸ್ ವಿಮಾನಗಳು ಹವಾಮಾನ ತೊಂದರೆಯಿಂದಾಗಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿವೆ. ಆದರೆ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ವಿಮಾನ ಪ್ರಯಾಣಿಕರು ಊಟ, ನೀರಿಲ್ಲದೆ ಪರದಾಡಿದ ಘಟನೆ ನಡೆದಿದೆ.

- Advertisement -

ದುಬೈ – ಅಬುಧಾಬಿ ಜುಲೈ 24 ರಂದು ರಾತ್ರಿ 11.30 ಕ್ಕೆ ಪ್ರಯಾಣ ಆರಂಭಿಸಿದ ಏರ್ ಇಂಡಿಯಾ ಎಕ್ಸ್’ಪ್ರೆಸ್ ಪ್ಲೈಟ್’ಗಳಾದ ಐ.ಎಕ್ಸ್ 0384 ಮತ್ತು ಐಎಕ್ಸ್ 0816 ಸೋಮವಾರ ಮುಂಜಾನೆ 4.30ಕ್ಕೆ ಮಂಗಳೂರು ಏರ್ಪೋರ್ಟ್’ನಲ್ಲಿ ಇಳಿಯಬೇಕಿತ್ತು. ಆದರೆ ವ್ಯತಿರಿಕ್ತ ಹವಾಮಾನದಿಂದಾಗಿ ಇಲ್ಲಿನ ರನ್’ವೇಯಲ್ಲಿ ಇಳಿಯಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಎರಡು ವಿಮಾನಗಳು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿವೆ. ಈ ಮಧ್ಯೆ ದುಬೈಯಿಂದ ಬಂದ ವಿಮಾನ ಅಪರಾಹ್ನ 2.30ಕ್ಕೆ ಬೆಂಗಳೂರಿಗೆ ತೆರಳಿದ್ದು, 3.30ಕ್ಕೆ ಮಂಗಳೂರು ಏರ್ಪೋರ್ಟ್’ನಲ್ಲಿ ಲ್ಯಾಂಡ್ ಆಗಲಿದೆ. ಅದೇ ರೀತಿ ಅಬುಧಾಬಿಯಿಂದ ಬಂದ ವಿಮಾನ 3.30ಕ್ಕೆ ಬೆಂಗಳೂರು ಏರ್ಪೋರ್ಟ್’ನಿಂದ ಹೊರಟು 4.30ಕ್ಕೆ ಮಂಗಳೂರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದುಬೈ ಮತ್ತು ಮಂಗಳೂರು ವಿಮಾನದಲ್ಲಿ ಸುಮಾರು 150 ಪ್ರಯಾಣಿಕರಿದ್ದು, ಅಬುಧಾಬಿಯಿಂದ ಬಂದ ವಿಮಾನದಲ್ಲಿ 130 ಪ್ರಯಾಣಿಕರು ಇದ್ದರು. ಈ ಪ್ರಯಾಣಿಕರು ಹವಾಮಾನ ಸಮಸ್ಯೆಯಿಂದಾಗಿ 12 ಗಂಟೆಗೂ ಅಧಿಕ ಸಮಯವನ್ನು ವಿಮಾನದಲ್ಲೇ ಕಳೆಯಬೇಕಾಗಿ ಬಂದಿತ್ತು.

- Advertisement -

ಈ ಮಧ್ಯೆ ಏರ್ ಇಂಡಿಯಾ ಎಕ್ಸ್’ಪ್ರೆಸ್ ವಿಮಾನದ ಅಧಿಕಾರಿಗಳ ನಡತೆ, ಬೇಜವಾಬ್ದಾರಿತನದ ಬಗ್ಗೆ ಹೆಚ್ಚಿನ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಮಾನ ವಿಳಂಬದಿಂದಾಗಿ ಕುಟುಂಬದವರನ್ನು ನೋಡಲಾಗದ ಪರಿಸ್ಥಿತಿ ಒಂದೆಡೆಯಾದರೆ, ಮದುವೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ಭಾಗವಹಿಸದ ನೋವು ಮತ್ತೊಂದು ಕಡೆ. ಅಲ್ಲದೆ ಮಹಿಳೆಯರು, ಮಕ್ಕಳು, ಹಿರಿಯರು, ಗರ್ಭಿಣಿಯರು, ರೋಗಿಗಳು ಸೇರಿದಂತೆ ಹಲವರ ಅಳಲು ಮುಗಿಲು ಮುಟ್ಟಿತ್ತು. ಆದರೆ ಏರ್ ಇಂಡಿಯಾ ಅಧಿಕಾರಿಗಳು ಈ ಯಾವುದೇ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿರಲಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಈ ಎಲ್ಲಾ ಪ್ರಯಾಣಿಕರು ಹಸಿವೆಯಿಂದ ಬಳಲುತ್ತಿದ್ದರೂ ಸಮಯಕ್ಕೆ ಸರಿಯಾಗಿ ಆಹಾರ, ನೀರು ನೀಡದೆ ಅವಾಂತರ ಸೃಷ್ಟಿಸಿದ್ದಾರೆಂದು ದೂರಿದ್ದಾರೆ. ಇಂತಹ ಕಳಪೆ ಸೇವೆಯನ್ನು ನೀಡುವುದಾದರೆ ಏರ್ ಇಂಡಿಯಾ ವಿಮಾನವನ್ನು ಮುಚ್ಚುವುದು ಸೂಕ್ತ ಎಂದು ಪ್ರಯಾಣಿಕರೊಬ್ಬರು ಕಿಡಿ ಕಾರಿದ್ದಾರೆ.

ಅಲ್ಲದೆ ನಮಗೆ ಸೂಕ್ತ ಸಮಯದಲ್ಲಿ ನೆರವಾಗದ ಏರ್ ಇಂಡಿಯಾ ಏಕ್ಸ್’ಪ್ರೆಸ್ ವಿಮಾನದ ಅಧಿಕಾರಿಗಳು ಪರಿಹಾರವನ್ನು ನೀಡಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.



Join Whatsapp