ಮಂಗಳೂರು: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾವಿರಾರು ಸಂಖ್ಯೆಯಲ್ಲಿ ಬೀದಿಗಿಳಿದ ಟೈಲರ್‌ ಗಳು

Prasthutha|

ಮಂಗಳೂರು: ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ಸದಸ್ಯರು ವೃತ್ತಿಗೆ ಸಂಬಂಧಿಸಿದ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ಮಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಜಾಥಾ ನಡೆಸಿದರು.

- Advertisement -

 ಬಲ್ಮಠ ಶಾಂತಿ ನಿಲಯ ಚರ್ಚ್ ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಜಾಥಾ ನಡೆಸಿದ ಟೈಲರ್ ಗಳು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು. ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಪ್ರಜ್ವಲ್ ನೇತೃತ್ವದಲ್ಲಿ ಜಾಥಾ ನಡೆಯಿತು.

ರಾಜ್ಯಾದ್ಯಂತ ಬಟ್ಟೆ ಹೊಲಿದು ಜೀವನ ಸಾಗಿಸುತ್ತಿರುವ ಟೈಲರ್ ವೃತ್ತಿಬಾಂಧವರಿಗೆ ಕೂಡಲೇ ಕ್ಷೇಮನಿಧಿ ನಿಗಮವನ್ನು ರಚಿಸಬೇಕು. ಭವಿಷ್ಯ ನಿಧಿ ಪಿಂಚಣಿ, ಆರೋಗ್ಯ ವಿಮೆಯನ್ನು ಜಾರಿಗೊಳಿಸಬೇಕು.

- Advertisement -

ಈವರೆಗೆ ಹಣ ಸಂದಾಯ ಮಾಡಿದ 60 ವರ್ಷ ತುಂಬಿದ ಎಲ್ಲಾ NPS ಫಲಾನುಭವಿಗಳ ವೇತನ ಘೋಷಣೆ ಮಾಡಬೇಕು ಮತ್ತು ಮಾಸಿಕ ರೂ.3,000 ದವರೆಗೆ ನಿವೃತ್ತಿ ವೇತನ ನೀಡಬೇಕು. ಹೊಲಿಗೆ ಕೆಲಸಗಾರರ ಹೆಣ್ಣುಮಕ್ಕಳಿಗೆ ವಿವಾಹಧನ ನೀಡಬೇಕು, ಮಹಿಳಾ ಹೊಲಿಗೆ ಕೆಲಸಗಾರರಿಗೆ ವಿವಾಹ ಧನ ಮತ್ತು ಹೆರಿಗೆ ಭತ್ಯೆ ನೀಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.

ಹೊಲಿಗೆ ಕೆಲಸಗಾರರ ಸ್ವಂತ ವಾಸಕ್ಕಾಗಿ ಮನೆ ಕೊಂಡುಕೊಳ್ಳಲು, ಮನೆ ಕಟ್ಟಲು ಅಥವಾ ಪುನರ್ ನಿರ್ಮಾಣ ಮಾಡಲು ಧನಸಹಾಯ ಮತ್ತು ಕಡಿಮೆ ಬಡ್ಡಿಯ ಸಾಲ ನೀಡಬೇಕು. ಹೊಲಿಗೆ ಕೆಲಸಗಾರರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನವನ್ನು ನೀಡಬೇಕು ಎಂದು ಆಗ್ರಹಿಸಿದರು.



Join Whatsapp