➤ ಋಣ ತೀರಿಸಲು ಮುಂದಾದ ಸಿದ್ದುವಿನ ರಾಜಕೀಯ ವೈರಿ ಮಗ
ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯನವರ 75ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಆಚರಿಸುತ್ತಿರುವ ಸಿದ್ದರಾಮೋತ್ಸವಕ್ಕೆ ಭರ್ಜರಿ ಸಿದ್ಧತೆಗಳು ನಡೆದಿವೆ.
ದಾವಣಗೆರೆಯಲ್ಲಿ ಆಗಸ್ಟ್ 03ರಂದು ಅದ್ಧೂರಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದಕ್ಕೆ ಕಾಂಗ್ರೆಸ್ ನೊಳಗೆ ಅತೀವ ಆಕ್ಷೇಪ ವ್ಯಕ್ತವಾಗುತ್ತಿದೆ. ಬಿಜೆಪಿ ನಾಯಕರು ಮನಸೋ ಇಚ್ಛೆ ಈ ಕಾರ್ಯಕ್ರಮವನ್ನು ಲೇವಡಿ ಮಾಡಿ ವ್ಯಂಗ್ಯವಾಡುತ್ತಿದ್ದಾರೆ.
ಅದರಲ್ಲೂ ಮುಖ್ಯವಾಗಿ ಸಿದ್ದು ರಾಜಕೀಯ ವೈರಿ ಬಿಜೆಪಿ ಪರಿಷ್ ಸದಸ್ಯ ಎಚ್ ವಿಶ್ವನಾಥ್ ಆಕ್ಷೇಪಿಸಿದ್ದು, ಹುಟ್ಟುಹಬ್ಬ ಕಾರ್ಯಕರ್ತರ ಉತ್ಸವವಾಗಬೇಕು. ಆದರೆ ವ್ಯಕ್ತಿ ಪೂಜೆಯ ಉತ್ಸವವಾಗಬಾರದು ಎಂದು ಹಲವು ಬಾರಿ ಟೀಕಿಸಿದ್ದರು.
ಆದರೆ ಇದೀಗ ವಿಶ್ವನಾಥ್ ಅವರ ಪುತ್ರ ಸಿದ್ದರಾಮೋತ್ಸಕ್ಕೆ ಕೈಜೋಡಿಸಿದ್ದು, ಜನರನ್ನ ಸೇರಿಸುವ ಹೊಣೆ ಹೊತ್ತಿಕೊಂಡಿದ್ದಾರೆ. ಸಿದ್ದರಾಮಯ್ಯನವರು ಹಾಗೂ ತಮ್ಮ ತಂದೆ ರಾಜಕೀಯ ಬದ್ಧ ವೈರಿಗಳು. ಆದರೂ ಸಹ ಇದೀಗ ಸಿದ್ದರಾಮೋತ್ಸವಕ್ಕೆ ಕೈಜೋಡಿಸಿರುವುದು ಅಚ್ಚರಿಗೆ ಕಾರಣವಾಗಿದೆ.
ನಾನು ಜಿಲ್ಲಾ ಪಂಚಾಯಿತಿ ಚುನಾವಣೆ ಗೆಲ್ಲಲು ಸಿದ್ದರಾಮಯ್ಯ ಕಾರಣ.ನನ್ನ ಪರ ಪ್ರಚಾರಕ್ಕೆ ಬಂದು ನನ್ನನ್ನು ಗೆಲ್ಲಿಸಿದರು. ಸಿದ್ದರಾಮಯ್ಯ ಹೊಳೆಯುವ ವಜ್ರವಿದ್ದಂತೆ. ನಾವು ಮತ್ತಷ್ಟು ಹೊಳಪು ನೀಡುವ ಕೆಲಸ ಮಾಡಬೇಕು. ಶಾಸಕ ಹೆಚ್ ಪಿ ಮಂಜುನಾಥ್, ಮುಖಂಡ ರವಿಶಂಕರ್ ಜೊತೆಗೂಡಿ ಹೆಚ್ಚಿನ ಜನರನ್ನ ಸೇರಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಅಂದಿನ ಋಣ ತೀರಿಸಿಲು ಮುಂದಾಗಿದ್ದಾರೆ.