ಕೆಪಿಎಸ್ ಸಿ ಫಲಿತಾಂಶ ವಿಳಂಬ: ಉದ್ಯೋಗ ಸೌಧದ ಮುಂದೆ ಉದ್ಯೋಗಾಕಾಂಕ್ಷಿಗಳಿಂದ ಪ್ರತಿಭಟನೆ

Prasthutha|

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ ಸಿ) ಎರಡು ವರ್ಷಗಳ ಹಿಂದೆ ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶವನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಉದ್ಯೋಗ ಸೌಧದ ಮುಂದೆ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದರು .

- Advertisement -

ರಾಜ್ಯ ಸರ್ಕಾರದ ನಾನಾ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ವೃಂದಗಳ 3,000ಕ್ಕೂ ಹೆಚ್ಚು ಹುದ್ದೆಗಳಿಗೆ ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ನಡೆಸಿದ ಸ್ಪರ್ಧಾತ್ಮಕ ಪರೀಕ್ಷೆಯ  ಫಲಿತಾಂಶಕ್ಕಾಗಿ ಕಾಯುತ್ತಿರುವ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳು ತಾಳ್ಮೆ ಕಳೆದುಕೊಂಡು ಕೆಪಿಎಸ್ ಸಿ ವಿರುದ್ಧವೇ ಅಸಮಧಾನಗೊಂಡಿದ್ದಾರೆ.

ಸಹಾಯಕ ಎಂಜಿನಿಯರ್ 660, ಗ್ರೂಪ್ ‘ಸಿ’ (ತಾಂತ್ರಿಕೇತರ) 387, ಗೆಜೆಟೆಡ್ ಪ್ರೊಬೇಷನರಿ (ಜಿಪಿ) 106 ಹುದ್ದೆಗಳ ನೇಮಕಾತಿಯ ಮುಖ್ಯಪರೀಕ್ಷೆ, ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ) 1,323, ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಕಿರಿಯ ಎಂಜಿನಿಯರ್ 330,  ಸಹಾಯಕ ಅರಣ್ಯ ಸಂರಕ್ಷಾಣಾಧಿಕಾರಿ (ಎಸಿಎಫ್) 16 ಹೀಗೆ ವಿವಿಧ ಹುದ್ದೆಗಳ ನೇಮಕಾತಿಗೆ ಪರೀಕ್ಷೆ ನಡೆದು ಹಲವು ತಿಂಗಳುಗಳೇ ಕಳೆದಿವೆ. ಆದರೆ, ಕೆಪಿಎಸ್ಸಿ ಮಾತ್ರ ಫಲಿತಾಂಶ ಪ್ರಕಟಿಸುವ ಲಕ್ಷಣ ಕಾಣುತ್ತಿಲ್ಲ. ಇದರಿಂದ ಉದ್ಯೋಗಕ್ಕಾಗಿ ಕಾಯುತ್ತಿರುವ  ಅಭ್ಯರ್ಥಿಗಳು ಹತಾಶೆಗೊಂಡಿದ್ದಾರೆ.

- Advertisement -

ಈಗಾಗಲೇ ನಡೆಸಿರುವ ಪರೀಕ್ಷೆಗಳ ಫಲಿತಾಂಶ ತಕ್ಷಣ ಪ್ರಕಟಿಸಬೇಕು, ಎರಡು ವರ್ಷಗಳಿಂದೀಚೆಗೆ ಸರ್ಕಾರ ವಹಿಸಿದ ಹಲವು ಹುದ್ದೆಗಳ ನೇಮಕಾತಿಗೆ ತ್ವರಿತವಾಗಿ ಅಧಿಸೂಚನೆ ಹೊರಡಿಸಬೇಕು, ಕೆಪಿಎಸ್ ಸಿ ಸುಧಾರಣೆಗೆ ರಚಿಸಿದ್ದ ಪಿ.ಸಿ. ಹೋಟಾ ಸಮಿತಿಯ ಶಿಫಾರಸು ಅನುಷ್ಠಾನಗೊಳಿಸಬೇಕು, ಯುಪಿಎಸ್ ಸಿ ಮಾದರಿಯಲ್ಲಿ ವಾರ್ಷಿಕ ಪರೀಕ್ಷಾ ವೇಳಾಪಟ್ಟಿ ಬಿಡುಗಡೆ ಮಾಡಬೇಕು ಎಂದು ಉದ್ಯೋಗಾಕಾಂಕ್ಷಿಗಳು ಆಗ್ರಹಿಸಿದ್ದಾರೆ.



Join Whatsapp