ಹುಬ್ಬಳ್ಳಿ: ಕ್ಯಾಂಡಲ್ ಫ್ಯಾಕ್ಟರಿಯಲ್ಲಿ ಸಂಭವಿಸಿದ ಆಕಸ್ಮಿಕ ಬೆಂಕಿ ಅವಘಡದಲ್ಲಿ 8 ಮಂದಿ ಕಾರ್ಮಿಕರು ತೀವ್ರವಾಗಿ ಗಾಯಗೊಂಡ ಘಟನೆ ನಗರದ ಹೊರ ವಲಯದ ತಾರಿಹಾಳ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಗಾಯಾಳುಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಪೈಕಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. ಗಾಯಗೊಂಡವರಲ್ಲಿ ಆರು ಮಂದಿ ಮಹಿಳೆಯರಾಗಿದ್ದಾರೆ.
ಮಲಿಕ್ರೆಹನ್ ಕೊಪ್ಪದ್ (18), ನಿರ್ಮಲಾ ಹುಚ್ಚಣ್ಣನವರ್ (29), ಗೌರವ್ವ ಹಿರೇಮಠ (45), ಚೆನ್ನವ್ವ ಅರಿಮಲ್ (42), ಪ್ರೇಮಾ ಅರಿಮಲ್ (20), ಮಾಲೇಶ್ ಹದ್ದಣ್ಣನವರ್ (27), ನಾನಿಮಾ ಪದದಾರ (35) ವಿಜಯಲಕ್ಷ್ಮಿ ಯಚ್ಚನಗರ (34) ಗಾಯಗೊಂಡ ಕಾರ್ಮಿಕರು.
ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ ಕೂಡಲೇ ಹುಬ್ಬಳ್ಳಿ, ಅಮರಗೋಳ, ಧಾರವಾಡ ಮತ್ತು ಕಲಘಟಗಿಯಿಂದ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ, ರಕ್ಷಣಾ ಕಾರ್ಯಾಚರಣೆ ನಡೆಸಿವೆ. ಆದರೆ ಬೆಂಕಿ ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ.
ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ಲಾಬೂ ರಾಮ್ ಮತ್ತು ಇತರ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಕ್ಯಾಂಡಲ್ ತಯಾರಿಕೆ ಫ್ಯಾಕ್ಟರಿ ಯಾರಿಗೆ ಸೇರಿದ್ದು ಎಂಬ ಬಗ್ಗೆಯೂ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.