ಕೊಡಗು: ಮಡಿಕೇರಿ ತಾಲೂಕಿನ ಮದೆನಾಡು ಸಮೀಪದ ಸೀಮೆ ಹುಲ್ಲು ಕಜೆ ಬೆಟ್ಟದಲ್ಲಿ ಮತ್ತೊಂದು ಜಲಸ್ಪೋಟವುಂಟಾಗಿದ್ದು, ಮಳೆ ನಿಂತರೂ ಬೆಟ್ಟದ ತಪ್ಪಲಿನ ಜನರು ಆತಂಕದಲ್ಲಿ ಜೀವಿಸುವಂತಾಗಿದೆ.
2018 ರಲ್ಲಿ ಗುಡ್ಡ ಕುಸಿದ ಪ್ರದೇಶದಲ್ಲಿ ಮತ್ತೆ ಜಲ ಸ್ಫೋಟಗೊಂಡಿದ್ದು, ಸದ್ಯ ಸೀಮೆ ಹುಲ್ಲು ಕಜೆಯಲ್ಲಿ ಭಾರೀ ಕುಸಿತ ಕಂಡಿದೆ. ಮದೆನಾಡಿನ ಕೊಪ್ಪಡ್ಕ ಸಮೀಪದ ಸೀಮೆ ಹುಲ್ಲು ಕಜೆ ಬೆಟ್ಟದಲ್ಲಿ ಗುಡ್ಡ ಕುಸಿತಗೊಂಡಿದ್ದು, ಈ ವೇಳೆ ಭಾರಿ ಶಬ್ಧ ಕೇಳಿ ಬಂದಿದೆ. ಬೆಟ್ಟದ ಕೆಳಭಾಗದಲ್ಲಿ ಸುಮಾರು 15 ಮನೆಗಳಿದ್ದು ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಮಳೆಯ ತೀವ್ರತೆ ಹೆಚ್ಚಾದಲ್ಲಿ ಬೆಟ್ಟಕುಸಿಯುವ ಆತಂಕ ಎದುರಾಗಿದ್ದು, ಬೆಟ್ಟ ಕುಸಿದ ಒಂದು ಭಾಗವಷ್ಟೇ ಕಣ್ಣಿಗೆ ಗೋಚರಿಸುತ್ತಿದೆ. ಇದು ಎಲ್ಲಿಂದ ಬಿರುಕು ಬಿಟ್ಟಿದೆ ಎನ್ನುವುದರ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಿಲ್ಲ. ಘಟನೆ ನಡೆದ ಸ್ಥಳಕ್ಕೆ ಮದೆನಾಡು ಗ್ರಾಮ ಲೆಕ್ಕಿಗ ರಮೇಶ್ ಭೆಟಿ ನೀಡಿ ಪರಿಶೀಲನೆ ನಡೆಸಿದರು.