ಉತ್ತರ ಪ್ರದೇಶ: ದೇವಸ್ಥಾನಕ್ಕೆ ದಲಿತರ ಪ್ರವೇಶ ತಡೆ : ಪ್ರವೇಶಿಸಿದವರಿಗೆ ಥಳಿತ ಮತ್ತು ಕೊಲೆ ಬೆದರಿಕೆ

Prasthutha|

ಆಗ್ರಾ: ಉತ್ತರ ಪ್ರದೇಶದ ಇಟಾ ಜಿಲ್ಲೆಯ ದಲಿತರಿಗೆ ಮೇಲ್ಜಾತಿಯ ಜನರು ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾದ ದೇವಾಲಯಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿದ್ದಾರೆ ಎಂದು ದಲಿತ ಸಮುದಾಯದ ಜನರು ಆರೋಪ ಮಾಡಿದ್ದಾರೆ.

- Advertisement -

ಮರ್ಹರಾ ಬ್ಲಾಕ್ ವ್ಯಾಪ್ತಿಯ ಹಿಮ್ಮತ್ ನಗರ್ ಬಜೇರಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ದಲಿತರು ದೇವಾಲಯ ಪ್ರವೇಶಿಸುವ ಧೈರ್ಯ ತೋರಿಸಿದರೆ ಅವರನ್ನು ಕೊಂದು ಹಾಕುತ್ತೇವೆ ಎಂದು ಮೇಲ್ಜಾತಿಯ ಜನರು ಬೆದರಿಕೆ ಹಾಕಿದ್ದಾರೆ.

ಈ ದೇವಾಲಯವನ್ನು ಸುಮಾರು 10 ವರ್ಷಗಳ ಹಿಂದೆ ಸರ್ಕಾರಿ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ವರದಿಯಾಗಿದ್ದು ಮೇಲ್ಜಾತಿಯ ಜನರು ದೇವಾಲಯವನ್ನು ಅತಿಕ್ರಮಿಸಿದ್ದಾರೆ ಮತ್ತು ದಲಿತರ ಪ್ರವೇಶ ಮತ್ತು ಪೂಜೆಯನ್ನು ನಿಷೇಧಿಸಿದ್ದಾರೆ ಎಂದು ದಲಿತ ಸಮುದಾಯವು ಆರೋಪಿಸಿದೆ.

- Advertisement -

ಕಳೆದ ಒಂದು ತಿಂಗಳಲ್ಲಿ ದೇವಸ್ಥಾನಕ್ಕೆ ಪ್ರವೇಶಿಸಲು ಪ್ರಯತ್ನಿಸಿದ ದಲಿತ ಸಮುದಾಯದ 12 ಜನರನ್ನು ಮೇಲ್ಜಾತಿಯವರು ಥಳಿಸಿದ್ದಾರೆ ಎಂದು ದೇವಾಲಯದ ಮಾಜಿ ಉಸ್ತುವಾರಿ ಮಥುರಾ ಪ್ರಸಾದ್ ಹೇಳಿದ್ದಾರೆ. ಇದನ್ನೂ ಮೀರಿ ಯಾರಾದರೂ ದಲಿತರು ದೇವಾಲಯವನ್ನು ಪ್ರವೇಶಿಸುವ ಧೈರ್ಯ ಮಾಡಿದರೆ ಅವರನ್ನು ಮೇಲ್ಜಾತಿಯ ಬಲಾಢ್ಯರು  ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಕೂಡಾ ಆರೋಪಿಸಿದ್ದಾರೆ..

ಜಿಲ್ಲಾಧಿಕಾರಿ ಕಚೇರಿಯಲ್ಲಿ ದಲಿತ ಸಮುದಾಯದಿಂದ ಪ್ರತಿಭಟನೆ ನಡೆದಿದ್ದು, ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ನಂತರ, ಜಿಲ್ಲಾ ಮ್ಯಾಜಿಸ್ಟ್ರೇಟ್ ದೂರು ಸಲ್ಲಿಸಿದ್ದು, ಆದಾಗ್ಯೂ ಆರೋಪಗಳು ಆಧಾರರಹಿತವಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಗ್ರಾಮದಲ್ಲಿ ಒಟ್ಟು 1140 ಜನರಿದ್ದು, ಅದರಲ್ಲಿ 600 ಮಂದಿ ದಲಿತ ಸಮುದಾಯಕ್ಕೆ ಸೇರಿದವರೇ ಆಗಿದ್ದರೂ ಅವರಿಗೆ ದೇವಾಲಯಕ್ಕೆ ನಿರ್ಬಂಧ ಹೇರಿರುವುದು ವಿಶೇಷವಾಗಿದೆ.



Join Whatsapp