ವೆಸ್ಟ್ ಇಂಡೀಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿ ಶುಕ್ರವಾರದಿಂದ ಪೋರ್ಟ್ ಆಫ್ ಸ್ಪೇನ್ನಲ್ಲಿ ಆರಂಭವಾಗಲಿದೆ. ಅನುಭವಿ ಆಟಗಾರರ ಅನುಪಸ್ಥಿತಿಯಲ್ಲಿ ಯಂಗ್ ಟೀಮ್ ಇಂಡಿಯಾ ಬಳಗವನ್ನು ಶಿಖರ್ ಧವನ್ ಮುನ್ನಡೆಸಲಿದ್ದಾರೆ.
ಈತ್ತೀಚಗಷ್ಟೇ ಮುಗಿದ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಆಡಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಮುಹಮ್ಮದ್ ಶಮಿ, ಜಸ್ಪ್ರೀತ್ ಬೂಮ್ರಾ, ರಿಷಭ್ ಪಂತ್ ಹಾಗೂ ಹಾರ್ದಿಕ್ ಪಾಂಡ್ಯರಿಗೆ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಗೆ ವಿಶ್ರಾಂತಿ ನೀಡಲಾಗಿದೆ. ಹೀಗಾಗಿ ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಆವೇಶ್ ಖಾನ್, ಪ್ರಸಿದ್ಧಕೃಷ್ಣ ಹಾಗೂ ಅರ್ಷದೀಪ್ ಸಿಂಗ್ ಅಂತಿಮ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
ಕಳೆದ ವಾರ ಮುಕ್ತಾಯಗೊಂಡ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ನಿಕೋಲಸ್ ಪೂರನ್ ಸಾರಥ್ಯದ ವಿಂಡೀಸ್ ಪಡೆ, ತನ್ನದೇ ನೆಲದಲ್ಲಿ ಹೀನಾಯ ಸೋಲು ಅನುಭವಿಸಿತ್ತು. ಮೂರು ಪಂದ್ಯಗಳಲ್ಲಿ ಬಾಂಗ್ಲಾ ಕ್ಲೀನ್ಸ್ವೀಪ್ ಸಾಧನೆ ಮಾಡಿತ್ತು. ಆದರೂ ಭಾರತದ ವಿರುದ್ಧದ ಪುಟಿದೇಳುವ ವಿಶ್ವಾಸದಲ್ಲಿದೆ ಕೆರಿಬಿಯನ್ ಬಳಗ. ಆಲ್ರೌಂಡರ್ ಜೇಸನ್ ಹೋಲ್ಡರ್ ಮರಳಿರುವುದು ತಂಡದ ಬಲ ಹೆಚ್ಚಿಸಿದೆ.
ಜಡೇಜಾಗೆ ಗಾಯ
ಟೀಮ್ ಇಂಡಿಯಾದ ಸ್ಟಾರ್ ಆಲ್ರೌಂಡರ್ ರವೀಂದ್ರ ಜಡೇಜಾ, ಅಭ್ಯಾಸದ ವೇಳೆ ಮೊಣಕಾಲಿನ ಗಾಯಕ್ಕೆ ತುತ್ತಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಶುಕ್ರವಾರದ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಬಲಾಬಲ
ಒಟ್ಟು ಮುಖಾಮುಖಿ 136
ಗೆಲುವು | ಭಾರತ : 67, ವೆಸ್ಟ್ ಇಂಡೀಸ್ 63. ಡ್ರಾ 2. ಫಲಿತಾಂಶ ದಾಖಲಾಗದ ಪಂದ್ಯಗಳು 4
ತಂಡಗಳು
ಭಾರತ: ಶಿಖರ್ ಧವನ್ (ನಾಯಕ), ಋತುರಾಜ್ ಗಾಯಕವಾಡ, ಶುಭಮನ್ ಗಿಲ್, ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್ (ವಿಕೆಟ್ಕೀಪರ್), ಶಾರ್ದೂಲ್ ಠಾಕೂರ್, ಯಜುವೇಂದ್ರ ಚಾಹಲ್, ಅಕ್ಷರ್ ಪಟೇಲ್, ಆವೇಶ್ ಖಾನ್, ಪ್ರಸಿದ್ಧಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್
ವೆಸ್ಟ್ ಇಂಡೀಸ್: ನಿಕೊಲಸ್ ಪೂರನ್ (ನಾಯಕ), ಶಾಯ್ ಹೋಪ್ (ಉಪನಾಯಕ), ಶಾಮ್ರಾ ಬ್ರೂಕ್ಸ್, ಕೀಚಿ ಕಾರ್ಟಿ, ಜೇಸನ್ ಹೋಲ್ಡರ್, ಅಕೀಲ್ ಹುಸೇನ್, ಅಲ್ಜರಿ ಜೋಸೆಫ್, ಬ್ರೆಂಡನ್ ಕಿಂಗ್, ಕೈಲ್ ಮೇಯರ್ಸ್, ಗಡಕೇಶ್ ಮೋಟೀ, ಕೀಮೊ ಪಾಲ್, ರೋವ್ಮನ್ ಪೊವೆಲ್. ಜೇಡನ್ ಸೀಲ್ಸ್.
ಪಂದ್ಯ ಆರಂಭ: ರಾತ್ರಿ 7
ಮೂರು ವರ್ಷಗಳ ಬಳಿಕ ಮೊದಲ ಪಂದ್ಯ !
ಟ್ರಿನಿಡಾಡ್ನ ಪೋರ್ಟ್ ಆಫ್ ಸ್ಪೇನ್ನ ಕ್ವೀನ್ಸ್ ಪಾರ್ಕ್ ಓವಲ್ನಲ್ಲಿ ಸುಮಾರು ಮೂರು ವರ್ಷಗಳ ಬಳಿಕ ಮೊದಲ ಏಕದಿನ ಪಂದ್ಯ ಆಯೋಜನೆಯಾಗುತ್ತಿದೆ. ಈ ಮೈದಾನದಲ್ಲಿ ಕೊನೆಯದಾಗಿ ನಡೆದ ಅಂತರಾಷ್ಟ್ರೀಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಶತಕದಿಂದಾಗಿ ಭಾರತ ಗೆದ್ದು ಬೀಗಿತ್ತು.