ಕುಂದಾಪುರ: ಶಿರೂರು ಟೋಲ್ ಪ್ಲಾಜಾದಲ್ಲಿ ನಡೆದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದು, ಅವಘಢದಲ್ಲಿ ಗಾಯಗೊಂಡ ಐವರ ಪೈಕಿ ಚಾಲಕ ರೋಶನ್ ರೋಡ್ರಿಗಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಉಳಿದ ನಾಲ್ವರು ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆ್ಯಂಬುಲೆನ್ಸ್ ಚಾಲಕನ ವಿರುದ್ಧ ಕೇಸು ದಾಖಲಾಗಿದೆ.
ಬುಧವಾರ ಸಂಜೆ ತುರ್ತು ಚಿಕಿತ್ಸೆಗೆಂದು ಹೊನ್ನಾವರದಿಂದ ರೋಗಿಯೊಬ್ಬರನ್ನು ಉಡುಪಿಗೆ ಕೊಂಡೊಯ್ಯುತ್ತಿದ್ದಾಗ ಶಿರೂರಿನ ಟೋಲ್ ಗೇಟಿನ ಕಂಬಕ್ಕೆ ಢಿಕ್ಕಿ ಹೊಡೆದು ಆ್ಯಂಬುಲೆನ್ಸ್ ಪಲ್ಟಿಯಾಗಿತ್ತು. ಮತ್ತು ರೋಗಿ ಸಹಿತ ನಾಲ್ವರು ಸಾವನ್ನಪ್ಪಿದ್ದರು. ಗಂಭೀರ ಗಾಯಗೊಂಡು ಮಂಗಳೂರು ಆಸ್ಪತ್ರೆಗೆ ದಾಖಲಾಗಿದ್ದ ಟೋಲ್ ಸಿಬ್ಬಂಧಿ ಸಹಿತ ನಾಲ್ವರು ಇದೀಗ ಚೇತರಿಸಿಕೊಳ್ಳುತ್ತಿದ್ದಾರೆ.
ಅಪಘಾತಕ್ಕೆ ಸಂಬಂಧಿಸಿದಂತೆ ಟೋಲ್ ಸಿಬ್ಬಂಧಿ ದೀಪಕ್ ಶೆಟ್ಟಿ ಎನ್ನುವವರು ಆ್ಯಂಬುಲೆನ್ಸ್ ಚಾಲಕ ರೋಶನ್ ರೋಡ್ರಿಗಸ್ ವಿರುದ್ಧ ದೂರು ನೀಡಿದ್ದು, ದೂರಿನನ್ವಯ ಕೇಸು ದಾಖಲಾಗಿದೆ. ಚಾಲಕನ ವೇಗದ ಹಾಗೂ ನಿರ್ಲಕ್ಷ್ಯದ ಚಾಲನೆಯಿಂದಾಗಿ ಅವಘಢ ಸಂಭವಿಸಿದೆ ಎಂದು ಅವರು ಆರೋಪಿಸಿದ್ದು, ಬೈಂದೂರು ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 279, 338, 304 ಅನ್ವಯ ಪ್ರಕರಣ ದಾಖಲಾಗಿದೆ.