ಬೆಂಗಳೂರು: ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ದೇವರಗುಡಿ ಎಂಬ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಹೋಗಬೇಕಾದರೆ ವಿದ್ಯಾರ್ಥಿಗಳು ಧರಿಸಿದ್ದ ಪ್ಯಾಂಟ್ ಕಳಚಿ ತಲೆ ಮೇಲೆ ಹೊತ್ತು ಹಳ್ಳ ದಾಟಬೇಕು. ನಿಜವಾಗಿಯೂ ಇದು ಇಡೀ ನಾಗರಿಕ ಸಮಾಜವನ್ನೇ ಪ್ರಶ್ನಿಸುವ ಹೃದಯ ವಿದ್ರಾವಕ ದೃಶ್ಯವಾಗಿದೆ, ಇದರಿಂದಾಗಿ ಹಲವಾರು ಹೆಣ್ಣು ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಸಂಪೂರ್ಣವಾಗಿ ಇದು ಸರಕಾರದ ಬೇಜವಾಬ್ದಾರಿತನವನ್ನು ಎತ್ತಿ ತೋರಿಸುತ್ತದೆ ಎಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಸಮಿತಿಯು ಆಕ್ರೋಶ ವ್ಯಕ್ತಪಡಿಸಿದೆ.
ದೇಶದ ಪ್ರಧಾನಿ ಮಾತನಾಡಿ ಶಿಕ್ಷಣದಲ್ಲಿ ಎಲ್ಲವನ್ನು ಸಾಧಿಸಿ ಬಿಟ್ಟಿದ್ದೇವೆ, NEP-202೦ ಮುಖಾಂತರ ಭಾರತವನ್ನು ವಿಶ್ವಗುರುವನ್ನಾಗಿ ಮಾಡಿದ್ದೇವೆ ಎಂದು ಹೇಳುತ್ತಾರೆ. ಈ ಗ್ರಾಮವು ಸಹ ಭಾರತ ದೇಶದಲ್ಲೇ ಇದೆ ಎಂಬುದನ್ನು ಕೇಂದ್ರ, ರಾಜ್ಯ ಸರಕಾರದ ಅರಿವಿಗೆ ತರಬೇಕಾಗಿದೆ. ತಮ್ಮ ಆಡಳಿತದಲ್ಲಿ ಇಲ್ಲದಿದ್ದೆಲ್ಲವನ್ನು ಸಾಧಿಸಿಯಾಗಿದೆ ಎಂದು ತಮ್ಮ ಕಾರ್ಯಕ್ಷಮತೆಯ ಬಗ್ಗೆ ವೈಭವೀಕರಿಸಿ ಮಾತನಾಡುವ ಬಿಜೆಪಿ ಎಲ್ಲಿ ಮಾಯವಾಗಿದೆ. ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನ ಪೂರೈಸಲು ಹಪಹಪಿಸುತ್ತಿರುವಾಗ ಶಿಕ್ಷಣ ಸಚಿವರು ತಮ್ಮ ರಾಜಕೀಯ ಬೇಳೆ ಬೇಯಿಸುವುದರಲ್ಲೇ ತಲ್ಲೀಣರಾಗಿದ್ದಾರೆ. ತಕ್ಷಣ ಸಂಭಂದಪಟ್ಟ ಇಲಾಖೆಯ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸಂಪರ್ಕ ರಸ್ತೆ ಕಲ್ಪಿಸಿ ವಿದ್ಯಾರ್ಥಿಗಳ ಶಿಕ್ಷಣದ ಹಿತ ದೃಷ್ಟಿಯಿಂದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ಆಗ್ರಹಿಸಿದ್ದಾರೆ.