ಜಿಲ್ಲಾ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ; ಎಎಸ್‌ಐ-ಸಿಹೆಚ್‌ಸಿ ಸೇರಿ 171 ಮಂದಿ ಠಾಣೆಯಿಂದ ಠಾಣೆಗೆ ವರ್ಗಾವಣೆ

Prasthutha|

ಹಾಸನ: ಜಿಲ್ಲೆಗೆ ಬಂದ ಕೆಲವೇ ದಿನಗಳಲ್ಲಿ ಎಸ್ಪಿ ಹರಿರಾಂ ಶಂಕರ್ ಅವರು, ಜಿಲ್ಲಾ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿದ್ದಾರೆ.

- Advertisement -

ಕಳೆದ ನಾಲ್ಕೈದು ದಿನಗಳ ಅಂತರದಲ್ಲಿ ಎಎಸ್‌ಐ, ಮುಖ್ಯಪೇದೆಗಳು ಹಾಗೂ ಪೇದೆಗಳು ಸೇರಿದಂತೆ ಒಟ್ಟು 171 ಮಂದಿಯನ್ನು ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ಹಾಗೂ ತಾಲೂಕಿನಿಂದ ತಾಲೂಕಿಗೆ ಅಂತರ್ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಆಡಳಿತಾತ್ಮಕ ಕಾರಣ, ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಹಾಗೂ ಕೆಲವರ ಕೋರಿಕೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಜಿಲ್ಲೆಯೊಳಗೇ ವರ್ಗವಾಗಿರುವವರಲ್ಲಿ 12 ಮಂದಿ ಎಎಸ್‌ಐ, 87 ಸಿಹೆಚ್‌ಸಿ ಹಾಗೂ ಉಳಿದವರು ಸಿಪಿಸಿಗಳಾಗಿದ್ದಾರೆ.

- Advertisement -

ಸಂಬಂಧಪಟ್ಟ ಅಧಿಕಾರಿಗಳು ವರ್ಗಾವಣೆಗೊಂಡಿರುವ ಸಿಬ್ಬಂದಿಗಳನ್ನು ಕೂಡಲೇ ಪಸ್ತುತ ಠಾಣಾ ಕರ್ತವ್ಯದಿಂದ ಬಿಡುಗಡೆಗೊಳಿಸಿ ಅವರನ್ನು ವರ್ಗಾವಣೆ ಮಾಡಿದ ಸ್ಥಳದಲ್ಲಿ ಯಾವುದೇ ಸೇರುವಿಕೆ ಕಾಲವನ್ನು ಉಪಯೋಗಿಸಿಕೊಳ್ಳದೆ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳುವಂತೆ ಸೂಚಿಸಿ ಬಿಡುಗಡೆಗೊಳಿಸಬೇಕು. ಸದರಿಯವರು ಯಾವುದೇ ವರ್ಗಾವಣೆ ಭತ್ಯೆ, ಅನುದಾನ ಭತ್ಯೆ ಹಾಗೂ ಸೇರುವಿಕೆ ಕಾಲಕ್ಕೆ ಅರ್ಹರಿರುವುದಿಲ್ಲ ಎಂದು ಜು.13 ರಂದು ಹೊರಡಿಸಿರುವ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.

ಕಳೆದ ಎರಡು-ಮೂರು ವರ್ಷಗಳಿಂದ ಕೊರೊನಾ ಕಾರಣದಿಂದ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಪ್ರಕ್ರಿಯೆ ಹೆಚ್ಚಾಗಿ ನಡೆದಿರಲಿಲ್ಲ. ಹೀಗಾಗಿ ಅನೇಕರು ಒಂದೇ ಠಾಣೆಯಲ್ಲಿ ಆರೇಳು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ನಡುವೆ ಕಳೆದ ಜು.2 ರಂದು ಜಿಪಂ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಯಾವುದೇ ಪೊಲೀಸ್ ಠಾಣೆಯಲ್ಲಿ 3 ವರ್ಷಕ್ಕಿಂತ ಹೆಚ್ಚು ಕರ್ತವ್ಯ ನಿರ್ವಹಿಸಿರುವ ಪೊಲೀಸ್ ಸಿಬ್ಬಂದಿಯನ್ನು ಆಯಾ ತಾಲೂಕು ಕೇಂದ್ರದಿಂದಲೇ ವರ್ಗಾವಣೆ ಮಾಡುವಂತೆ ಸಂಸದ ಪ್ರಜ್ವಲ್ ರೇವಣ್ಣ, ಶಾಸಕರಾದ ಎಚ್.ಡಿ. ರೇವಣ್ಣ, ಕೆ.ಎಸ್.ಲಿಂಗೇಶ್, ಕೆ.ಎಂ.ಶಿವಲಿಂಗೇಗೌಡ, ಎಚ್.ಕೆ. ಕುಮಾರಸ್ವಾಮಿ ಮೊದಲಾದವರು ಒತ್ತಾಯಿಸಿದ್ದರು.

ಕೆಲ ಸಿಬ್ಬಂದಿ ತಮ್ಮ ಠಾಣೆ ವ್ಯಾಪ್ತಿಯಲ್ಲಿ ನಡೆಯುವ ಎಲ್ಲಾ ಅಕ್ರಮ, ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತಿದ್ದಾರೆ. ಇದರಿಂದ ಕಾನೂನು ಸುವ್ಯವಸ್ಥೆ ಹದಗೆಡಲು ಕಾರಣವಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದರು. ಈ ಎಲ್ಲಾ ಕಾರಣಗಳಿಂದ ಹೆಚ್ಚು ವರ್ಷ ಒಂದೇ ಠಾನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಎಎಸ್‌ಐ, ಮುಖ್ಯಪೇದೆ ಮತ್ತು ಪೇದೆಗಳನ್ನು ಎತ್ತಂಗಡಿ ಮಾಡಲಾಗಿದೆ.

ಆರೇಳು ವರ್ಷಗಳ ಕಾಲ ಒಂದೇ ಕಡೆ ಉಳಿದಿದ್ದವರನ್ನು ಅಲ್ಲಿಂದ ಬೇರೆಡೆಗೆ ವರ್ಗ ಮಾಡುವ ಮೂಲಕ ಹರಿರಾಂ ಶಂಕರ್ ಖಡಕ್ ಹೆಜ್ಜೆ ಇಟ್ಟಿದ್ದಾರೆ. ಈ ಮೂಲಕ ಇಲಾಖೆಯಲ್ಲಿ ಬಿಗಿ ಕ್ರಮ ತರಲು ಮುಂದಾಗಿದ್ದಾರೆ. ಇದು ಸಾರ್ವಜನಿಕ ವಲಯದಲ್ಲಿ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ವರ್ಗಾವಣೆ ವೇಳೆ ಕೆಲವರ ಕೋರಿಕೆಗೂ ಎಸ್ಪಿ ಅವರು ಮನ್ನಣೆ ನೀಡಿರುವುದು ಗಮನಾರ್ಹ. ಜೊತೆಗೆ ಕೌನ್ಸೆಲಿಂಗ್ ಮಾನದಂಡವನ್ನೂ ಅನುಸರಿಸಲಾಗಿದೆ. ಒಂದಲ್ಲ ಒಂದು ಕಾರಣಕ್ಕೆ ಹಲವರಿಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ಸಾಧ್ಯವಾಗಿರಲಿಲ್ಲ. ಮತ್ತೆ ಕೆಲವರು ತಮ್ಮದೇ ಪ್ರಭಾವ ಬಳಿಸಿ ಇದ್ದಲ್ಲಿಯೇ ಮುಂದುವರಿದಿದ್ದರು. ಇದೀಗ ನೂತನ ಎಸ್ಪಿ ಬರೋಬ್ಬರಿ 171 ಅಧಿಕಾರಿಗಳು, ಸಿಬ್ಬಂದಿಯನ್ನು ಎತ್ತಂಗಡಿ ಮಾಡುವ ಮೂಲಕ ಇಲಾಖೆ ಕಾರ್ಯವೈಖರಿಗೆ ಹೊಸ ಹುರುಪು ತರಲು ಮುಂದಾಗಿದ್ದಾರೆ.

ಈ ಬಗ್ಗೆ ಮಾತನಾಡಿದ ಎಸ್ಪಿ ಹರಿರಾಂ ಶಂಕರ್, ನಾಲ್ಕೈದು ದಿನಗಳ ಅಂತರದಲ್ಲಿ ಇಡೀ ಜಿಲ್ಲಾ ವ್ಯಾಪ್ತಿಯಲ್ಲಿ 5 ವರ್ಷಗಳಿಗೂ ಹೆಚ್ಚು ಕಾಲ ಒಂದೇ ಸ್ಟೇಷನ್‌ನಲ್ಲಿ ಕೆಲಸ ಮಾಡುತ್ತಿದ್ದ 171 ಅಧಿಕಾರಿ ಹಾಗೂ ಸಿಬ್ಬಂದಿಯನ್ನು ವರ್ಗ ಮಾಡಲಾಗಿದೆ. ಅನೇಕರು ಹೆಚ್ಚು ವರ್ಷ ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಈ ಕಾರಣದಿಂದ ಅಂತವರನ್ನು ವರ್ಗಾವಣೆಗೆ ಮಾಡಲಾಗಿದೆ ಎಂದು ಹೇಳಿದರು.



Join Whatsapp