ಪತ್ನಿ ಹತ್ಯೆಗೈದು ಪತಿ ಪರಾರಿ: ತಂದೆ ವಿರುದ್ಧ ಮಗಳ ದೂರು

Prasthutha|

ಬೇಲೂರು: ಪ್ರೀತಿಸಿ ಮದುವೆಯಾಗಿ 17 ವರ್ಷ ಸಂಸಾರ ಮಾಡಿದ ನಂತರ ಪಾಪಿ ಪತಿ, ಪತ್ನಿಯನ್ನು ಬರ್ಬರವಾಗಿ ಕೊಲೆಗೈದಿರುವ ಘಟನೆ ಪಟ್ಟಣದ ಪಂಪ್‌ಹೌಸ್ ರಸ್ತೆಯಲ್ಲಿ ನಡೆದಿದೆ.

- Advertisement -

ಅಶ್ವಿನಿ (36) ಕೊಲೆಯಾದ ಮಹಿಳೆ. ಮಾರಕಾಸ್ತ್ರದಿಂದ ಚುಚ್ಚಿ ಅಶ್ವಿನಿಯನ್ನು ಕೊಲೆ ಮಾಡಿದ ನಂತರ ದುರುಳ ಪತಿ ಜಗದೀಶ್ ನಾಪತ್ತೆಯಾಗಿದ್ದಾನೆ.

ಅನ್ಯಕೋಮಿನ ಅಶ್ವಿನಿ ಮತ್ತು ಜಗದೀಶ್, ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಒಂದು ಹೆಣ್ಣು, ಒಂದು ಗಂಡು ಮಗನಿದ್ದು, ಆರಂಭದಿಂದಲೂ ಸಂಸಾರ ಚೆನ್ನಾಗಿಯೇ ಇತ್ತು. ಮೆಡಿಕಲ್ ಶಾಪ್ ಇಟ್ಟು ಕೈಸುಟ್ಟು ಕೊಂಡಿದ್ದ ಜಗದೀಶ್, ನಂತರ ಸಣ್ಣ ಟೀ ಅಂಗಡಿ ಇಟ್ಟುಕೊಂಡಿದ್ದ ಎನ್ನಲಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಶ್ವಿನಿ-ಜಗದೀಶ್ ನಡುವೆ ಜಗಳ ನಡೆಯುತ್ತಿತ್ತು. ಸಣ್ಣಪುಟ್ಟ ಕಾರಣಕ್ಕೂ ಜಗದೀಶ್ ಜಗಳ ಕಾಯುತ್ತಿದ್ದ. ಇದರಿಂದ ಮನನೊಂದು ಮಕ್ಕಳೊಂದಿಗೆ ಪ್ರತ್ಯೇಕ ಬಾಡಿಗೆ ಮನೆ ಮಾಡಿ ಅಶ್ವಿನಿ ವಾಸವಾಗಿದ್ದಳು. ಮೆಡ್‌ಪ್ಲಸ್‌ಗೆ ಕೆಲಸಕ್ಕೆ ಸೇರಿ ಮಕ್ಕಳನ್ನು ಸಾಕುತ್ತಿದ್ದಳು.

- Advertisement -

ಪತಿ-ಪತ್ನಿ ಕಲಹದ ವಿಚಾರವಾಗಿ ವರ್ಷದ ಹಿಂದೆ ಸ್ಥಳೀಯ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಆಗ ಅಶ್ವಿನಿ ತನ್ನ ಮತ್ತು ಮಕ್ಕಳ ಜೀವನ ನಿರ್ವಹಣೆಗಾಗಿ ಜೀವನಾಂಶ ಕೊಡಿಸಬೇಕು ಎಂದು ನ್ಯಾಯಾಲಯದ ಮೊರೆ ಹೋಗಿದ್ದರು. ಅದಾದ ಬಳಿಕ ತಿಂಗಳಿಗೆ 15 ಸಾವಿರ ಜೀವನಾಂಶ ನೀಡುವಂತೆ ಕೋರ್ಟ್ ಮಧ್ಯಂತರ ಆದೇಶ ಮಾಡಿತ್ತು. ಆದರೆ ತಾನೇ ಬರಿಗೈ ಆಗಿದ್ದ ಜಗದೀಶ್‌ಗೆ ಜೀವನಾಂಶ ಹಣ ಹೊಂದಿಸುವುದು ಕಷ್ಟವಾಗಿತ್ತು.

ಈ ನಡುವೆ ಪ್ರತ್ಯೇಕವಾಗಿ ವಾಸವಿದ್ದ ಪತ್ನಿಯ ಮನವೊಲಿಸಿ ಆಗಿದ್ದು ಆಗಿ ಹೋಯಿತು. ಮುಂದೆ ಇಬ್ಬರೂ ಒಟ್ಟಿಗೆ ಬಾಳೋಣ ಎಂದು ನಾಟಕ ಆಡಿದ್ದ. ಕಳೆದ ಕೆಲ ತಿಂಗಳಿಂದ ಪತ್ನಿ ಜೊತೆಯಲ್ಲೇ ಇದ್ದು, ಇಬ್ಬರು ಮಕ್ಕಳನ್ನು ಶಾಲೆಗೆ ಬಿಡುವುದು, ಹಾಗೆಯೇ ಪತ್ನಿಯನ್ನೂ ಮೆಡ್‌ಪ್ಲಸ್ ಬಿಟ್ಟು ಕರೆತರುವ ಕೆಲಸ ಮಾಡುತ್ತಿದ್ದ.

ನಿನ್ನೆ ಬೆಳಗ್ಗೆ ಸಹ ಮಕ್ಕಳನ್ನು ಶಾಲೆಗೆ ಬಿಟ್ಟು ಬಂದಿದ್ದ ದುರುಳ, ಮಧ್ಯಾಹ್ನ ಪತ್ನಿಯನ್ನೂ ಮನೆಗೆ ಊಟಕ್ಕೆ ಕರೆತಂದಿದ್ದ. ಅದಾದ ಕೆಲವೇ ಹೊತ್ತಿನಲ್ಲಿ ಆಕೆಯನ್ನು ಬರ್ಬರವಾಗಿ ಕೊಂದು ಪರಾರಿಯಾಗಿದ್ದಾನೆ.

ಮಕ್ಕಳು ಶಾಲೆ ಮುಗಿಸಿ ಮನೆಗೆ ಬರುವ ಹೊತ್ತಿಗೆ ತಾಯಿ ರಕ್ತದ ಮಡುವಿನಲ್ಲಿ ಬಿದ್ದು ಹೆಣವಾಗಿದ್ದಳು. ನಂತರವಷ್ಟೇ ನೆರೆಹೊರೆಯವರು ಹಾಗೂ ಪೊಲೀಸರಿಗೆ ಮಾಹಿತಿ ತಿಳಿದಿದೆ. ಸಾಕಿ ಸಲಹುತ್ತಿದ್ದ ತಾಯಿಯನ್ನು ಕಳೆದುಕೊಂಡು ಮಕ್ಕಳು ಕಣ್ಣೀರಿಡುತ್ತಿರುವ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ತೇವವಾಗಿಸಿದವು. ಪತ್ನಿಯನ್ನು ಬರ್ಬರವಾಗಿ ಕೊಂದು ಮಕ್ಕಳನ್ನು ಅನಾಥವಾಗಿಸಿರುವ ಪಾಪಿಗೆ ತಕ್ಕ ಶಾಸ್ತಿಯಾಗಬೇಕು. ಹೆಣ್ಣು ಮಕ್ಕಳ ಬಗ್ಗೆ ತಲೆಯಲ್ಲಿ ಕೆಟ್ಟ ಆಲೋಚನೆಗಳನ್ನು ತುಂಬಿಕೊಂಡಿರುವ ಕಿಡಿಕೇಡಿಗಳಿಗೆ ಪಾಠ ಆಗುವ ರೀತಿಯಲ್ಲಿ ಶಿಕ್ಷಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಕುರಿತು ಕಣ್ಣೀರಿಡುತ್ತಲೇ ಮಾತನಾಡಿದ ಮೃತರ ಮಗಳು, ತಂದೆ ಸಣ್ಣಪುಟ್ಟ ಕಾರಣಕ್ಕೂ ಅಮ್ಮನಿಗೆ ತೊಂದರೆ ನೀಡುತ್ತಿದ್ದರು. ಕೆಲಸದಿಂದ ಸ್ವಲ್ಪ ತಡವಾಗಿ ಬಂದರೂ, ಪ್ರಶ್ನೆ ಮಾಡುತ್ತಿದ್ದರು. ಮುಂದೆ ಜೊತೆಯಾಗಿ ಇರೋಣ ಎಂದು ಹೇಳಿ ಬಂದು ಹೀಗೆ ಮಾಡಿದ್ದಾರೆ ಎಂದು ದೂರಿದಳು.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ ಎಸ್ಪಿ ಹರಿರಾಂ ಶಂಕರ್, ಈ ಕೃತ್ಯವನ್ನು ನೋಡಿದರೆ ಪತಿಯ ಮೇಲೆಯೇ ಅನುಮಾನ ಇದ್ದು, ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಘಟನೆಗೆ ಕಾರಣ ಏನು ಎಂಬುದನ್ನು ತಿಳಿಯಲಾಗುವುದು ಎಂದರು.



Join Whatsapp