ನಾಗ್ಪುರ್: ಸಾಲದ ಹೊರೆ ತಾಳಲಾರದೆ ಉದ್ಯಮಿ ಹಾಗೂ ತನ್ನ ಕುಟುಂಬದ ಸದಸ್ಯರೊಂದಿಗೆ ಕಾರಿನೊಳಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.
ಘಟನೆಯಲ್ಲಿ ಉದ್ಯಮಿ ಸಾವನ್ನಪ್ಪಿದ್ದು, ಪತ್ನಿ ಮತ್ತು ಮಗ ತೀವ್ರ ಸುಟ್ಟ ಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ರಾಮ್ ರಾಜ್ ಭಟ್ (58ವರ್ಷ) ಅವರು ಪತ್ನಿ ಮತ್ತು ಮಗನನ್ನು ಹೋಟೆಲ್’ಗೆ ಕರೆದೊಯ್ಯುವ ನೆಪದಲ್ಲಿ ಕಾರಿಗೆ ಹತ್ತಿಸಿಕೊಂಡಿದ್ದಾರೆ.
ಹೋಟೆಲ್ ತಲುಪುವ ಮುನ್ನ ಮಾರ್ಗದಲ್ಲಿ ಕಾರನ್ನು ನಿಲ್ಲಿಸಿ, ತನ್ನ ಹಾಗೂ ಪತ್ನಿ, ಮಗನ ಮೇಲೆ ಪೆಟ್ರೋಲ್ ಸುರಿದು ಬೆಂಕಿಹಚ್ಚಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಗಂಭೀರವಾಗಿ ಸುಟ್ಟ ಗಾಯದಿಂದ ರಾಮ್ ರಾಜ್ ಭಟ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಆದರೆ ಪತ್ನಿ ಸಂಗೀತಾ ಭಟ್ (57ವರ್ಷ) ಮತ್ತು ಪುತ್ರ ನಂದನ್ (25ವರ್ಷ) ಕಾರಿನ ಡೋರ್ ತೆಗೆದು ಹೊರಗೆ ಹಾರಿದ್ದರು. ಇಬ್ಬರೂ ತೀವ್ರವಾಗಿ ಸುಟ್ಟು ಹೋಗಿದ್ದು, ಚಿಂತಾಜನಕ ಸ್ಥಿತಿಯಲ್ಲಿರುವುದಾಗಿ ತಿಳಿದು ಬಂದಿದೆ.
ಕಾರಿನೊಳಗೆ ಪ್ಲ್ಯಾಸ್ಟಿಕ್ ಬ್ಯಾಗ್ ಸಿಕ್ಕಿದ್ದು, ಅದರಲ್ಲಿ ಸಾಲದ ಬಗ್ಗೆ ಉಲ್ಲೇಖಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.