ಲಕ್ನೋ ಮಾಲ್ ನಲ್ಲಿ ನಮಾಝ್: ನಾಲ್ವರ ಬಂಧನ

Prasthutha|

ಲಕ್ನೋ: ಒಂದು ಕಡೆ ಮುಖ್ಯಮಂತ್ರಿ ಆದಿತ್ಯನಾಥ್ ಒತ್ತಡ, ಇನ್ನೊಂದು ಕಡೆ ಮಂಗಳವಾರ ಅಯೋಧ್ಯೆಯಿಂದ ತಪಸ್ವಿ ಚಾವನಿಯ ಪರಮಹಂಸ ದಾಸ್ ಲಕ್ನೋದ ಲುಲು ಮಾಲ್ ನಲ್ಲಿ ಪ್ರತಿಭಟನೆ ನಡೆಸಲು ಬಂದುದರಿಂದ ಬೇರೆ ದಾರಿ ಕಾಣದೆ, ಆ ಮಾಲ್ ನಲ್ಲಿ ನಮಾಝ್ ಮಾಡಿದ್ದರು ಎನ್ನಲಾದ ನಾಲ್ವರನ್ನು ಲಕ್ನೋ ಪೊಲೀಸರು ಬಂಧಿಸಿದ್ದಾರೆ.

- Advertisement -

ಪರಮಹಂಸರ ದಂಡು ಮಾಲ್ ನ ಶುದ್ಧೀಕರಣ, ಹನುಮಾನ್ ಚಾಲಿಸಾ ಪಠಣಕ್ಕೆ ಪ್ರಯತ್ನಿಸಿದಾಗ ಪೊಲೀಸರು ಅವರನ್ನು ಸುತ್ತುವರಿದರು. ನಾಲ್ವರ ಬಂಧನದ ಸುದ್ದಿ ನೀಡಿದ ಮೇಲೆ ಆ ಪ್ರಯತ್ನ ನಿಲ್ಲಿಸಲಾಯಿತು.

ಲಕ್ನೋ ಕುರ್ರಂ ನಗರದ ಮುಹಮ್ಮದ್ ರೆಹಾನ್, ಅತೀಫ್ ಖಾನ್,  ಸೀತಾಪುರದ ಸಹೋದರರಾದ ಲುಕ್ಮಾನ್ ಆಲಿ, ನೌಮಾನ್ ಆಲಿ ಬಂಧಿತರು ಎಂದು ತಿಳಿದುಬಂದಿದೆ.

- Advertisement -

ಆತಿಫ್ ಖಾನ್ 2ನೇ ವರ್ಷದ ಬಿಫಾರ್ಮಾ ವಿದ್ಯಾರ್ಥಿ, ಲುಕ್ಮಾನ್ ಸೀತಾಪುರ ಮದ್ರಸಾದಲ್ಲಿ ಮೌಲ್ವಿ, ನೌಮಾನ್ ವಿದ್ಯಾರ್ಥಿಯಾದರೆ, ಮುಹಮ್ಮದ್ ರೆಹಾನ್ ವಿದ್ಯಾರ್ಥಿ ಎಂದು ಪೊಲೀಸರು ತಿಳಿಸಿದ್ದಾರೆ.

ಮಾಲ್ ನ ವಕ್ತಾರ ಸಿಬ್ತೇನ್ ಹುಸೇನ್ ಅವರು ಜು. 14ರಂದು ನೀಡಿದ್ದ ದೂರಿನ ಮೇಲೆ ನಾಲ್ವರನ್ನು ಬಂಧಿಸಿರುವುದಾಗಿಯೂ, ಸಿಸಿಟೀವಿ ದೃಶ್ಯದಿಂದ ಆರೋಪಿಗಳನ್ನು ಗುರುತಿಸಿರುವುದಾಗಿಯೂ ಲಕ್ನೋ ಕಮಿಷನರ್ ಡಿ. ಕೆ. ಠಾಕೂರ್ ತಿಳಿಸಿದ್ದಾರೆ.

ಭಾರತೀಯ ದಂಡ ಸಂಹಿತೆ 153ಎ ಅಡಿ ಅಂದರೆ ಎರಡು ಗುಂಪು, ಮತ, ಸಮುದಾಯಗಳ ನಡುವೆ ವೈರ ಹುಟ್ಟಿಸುವ ಕಲಂನಡಿ ಬಂಧಿಸಿರುವುದಾಗಿಯೂ ಕಮಿಷನರ್ ತಿಳಿಸಿದರು. ಅಲ್ಲದೆ ಐಪಿಸಿ 295, 505, 341 ವಿಧಿಗಳಡಿಯೂ ಎಫ್ ಐಆರ್ ಆಗಿದೆ.

ಜು. 12ರಂದು ಇವರು ಲುಲು ಮಾಲ್ ನಲ್ಲಿ ನಮಾಝ್ ಮಾಡಿದ್ದು ಜಾಲ ತಾಣಗಳಲ್ಲಿ ವೈರಲ್ ಆಗಿತ್ತು. ಅದು 13ನೇ ತಾರೀಕಿನಂದು ಹಿಂದುತ್ವವಾದಿಗಳು ದಾಂಧಲೆವೆಬ್ಬಿಸಿದ್ದರು.

ಇದೇ ವೇಳೆ ಹನುಮಾನ್ ಚಾಲೀಸಾ ಪಠಣಕ್ಕೆ ಮಾಲ್ ಗೆ ಮುತ್ತಿಗೆ ಹಾಕಿದ 50ರಷ್ಟು ಬಲಪಂಥೀಯರನ್ನೂ ಬಂಧಿಸಿ, ಎಚ್ಚರಿಕೆ ನೀಡಿ ಬಿಟ್ಟಿರುವುದಾಗಿ ವರದಿಯಾಗಿದೆ.



Join Whatsapp