ಗ್ಯಾನ್ ವಾಪಿ ಮಸೀದಿಯಲ್ಲಿನ ಶಿವಲಿಂಗ ಪೂಜೆಗೆ ಅವಕಾಶ ಕೋರಿಕೆ: ಜು.21ರಂದು ಸುಪ್ರೀಂ ವಿಚಾರಣೆ

Prasthutha|

ನವದೆಹಲಿ: ಗ್ಯಾನ್ ವಾಪಿ ಮಸೀದಿಯಲ್ಲಿ ದೊರೆತ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜು.21ರಂದು ವಿಚಾರಣೆಗೆ ಪಟ್ಟಿ ಮಾಡುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ತಿಳಿಸಿದೆ.

- Advertisement -

ಶಿವಲಿಂಗದ ಕಾರ್ಬನ್ ಡೇಟಿಂಗ್ ಗೆ ಅವಕಾಶ ಮಾಡಿ ಶಿವಲಿಂಗವು ಎಷ್ಟು ಹಳೆಯದು ಎಂಬುದನ್ನು ಖಚಿತಪಡಿಸಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿದೆ.

ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎನ್. ವಿ. ರಮಣ ಮತ್ತು ಜಸ್ಟಿಸ್ ಗಳಾದ ಕೃಷ್ಣ ಮುರಾರಿ ಹಾಗೂ ಹಿಮಾ ಕೊಹ್ಲಿ ಅವರಿದ್ದ ಪೀಠವು ವಕೀಲ ವಿಷ್ಣು ಶಂಕರ್ ಜೈನ್ ಮಾಡಿದ ಮನವಿಯನ್ನು ಸ್ವೀಕರಿಸಿ, ಗ್ಯಾನ್ ವಾಪಿ ಮಸೀದಿಯ ನಿರ್ವಹಣೆಯ ಅಂಜುಮನ್ ಇಂತೆಝಾಮಿಯಾ ಮಸ್ಜಿದ್ ಸಮಿತಿಯ ಬಾಕಿ ಪ್ರಕರಣಗಳೊಂದಿಗೆ ಇದನ್ನು ವಿಚಾರಣೆಗೆ ಜು. 21ರಂದು ಎತ್ತಿಕೊಳ್ಳುವುದಾಗಿ ತಿಳಿಸಿತು.

- Advertisement -

ಜಸ್ಟಿಸ್ ಎನ್. ವೈ. ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟಿನ ಇನ್ನೊಂದು ಪೀಠವು ಶಿವಲಿಂಗ ದೊರೆತ ಗ್ಯಾನ್ ವಾಪಿ ಶೃಂಗಾರ ಗೌರಿ ಸಮುಚ್ಚಯದ ಸಮೀಕ್ಷೆಯನ್ನು ಪ್ರಶ್ನಿಸಿರುವ ಮಸೀದಿ ಸಮಿತಿಯ ಅರ್ಜಿಯನ್ನು ಜು. 21ರಂದು ವಿಚಾರಣೆ ನಡೆಯುವುದಾಗಿ ಹೇಳಿದರು.

ಮಸೀದಿ ವ್ಯಾಪ್ತಿಯಲ್ಲಿ ದೊರೆತ ಶಿವಲಿಂಗದ ದರ್ಶನ ಮತ್ತು ಪೂಜೆಗೆ ಅವಕಾಶ ಮಾಡಿಕೊಡಬೇಕು ಎಂದು ಅರ್ಜಿಯಲ್ಲಿ ಕೇಳಿರುವುದಲ್ಲದೆ ಸರ್ವೆ ಇಂಡಿಯಾವು ಶಿವಲಿಂಗದ ಕಾರ್ಬನ್ ಡೇಟಿಂಗ್ ನಡೆಸಿ ಕಾಲ ತಿಳಿಸಬೇಕು ಎಂದೂ ಕೋರಲಾಗಿದೆ.

ಅದಕ್ಕೆ ಮೊದಲು ಜು. 21ರಂದು ಸರ್ವೆಯನ್ನು ಮಸೀದಿ ಸಮಿತಿಯು ಚಾಲೆಂಜ್ ಮಾಡಿರುವ ಪ್ರಕರಣದ ವಿಚಾರಣೆ ಇರುವುದರಿಂದ ಈ ಅರ್ಜಿಯ ವಿಚಾರಣೆಯನ್ನೂ ಅಂದೇ ಇಟ್ಟುಕೊಳ್ಳಬೇಕು ಎಂದು ವಕೀಲ ಜೈನ್ ಮನವಿ ಮಾಡಿದರು.

ಸರ್ವೋಚ್ಚ ನ್ಯಾಯಾಲಯವು ಅದನ್ನು ಒಪ್ಪಿ ಜಸ್ಟಿಸ್ ಚಂದ್ರಚೂಡ್ ನೇತೃತ್ವದ ಪೀಠದಲ್ಲೇ ಜು.21ರಂದು ಎರಡೂ ವಿಚಾರಣೆಗೆ ಬರಲಿದೆ.

ಶಿವಲಿಂಗ ದೊರೆತ ಗ್ಯಾನ್ ವಾಪಿ ಶೃಂಗಾರ ಗೌರಿ ಸಮುಚ್ಚಯದ ಶಿವಲಿಂಗಕ್ಕೆ ರಕ್ಷಣೆ ನೀಡಬೇಕು, ಹಾಗೂ ಮಸೀದಿಯಲ್ಲಿ ನಮಾಝ್ ಮತ್ತು ಧಾರ್ಮಿಕ ಕಾರ್ಯ ನಡೆಸಲು ಯಾವುದೇ ಅಡಚಣೆ ಉಂಟಾಗದಂತೆ ಭದ್ರತೆ ತೆಗೆದುಕೊಳ್ಳಬೇಕು ಎಂದು ಮೇ 17ರಂದು ಸುಪ್ರೀಂ ಕೋರ್ಟು ವಾರಣಾಸಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ನಿರ್ದೇಶನ ನೀಡಿತ್ತು.

ಹಿಂದೂ ಭಕ್ತರು ಗ್ಯಾನ್ ವಾಪಿ ಮಸೀದಿ ಬಗ್ಗೆ ಸಲ್ಲಿಸಿದ್ದ ಸಿವಿಲ್ ವ್ಯಾಜ್ಯವನ್ನು ವಾರಣಾಸಿ ನ್ಯಾಯಾಧೀಶರ ಬಳಿಯಿಂದ  ಆ ಬಳಿಕ ಜಿಲ್ಲಾ ನ್ಯಾಯಾಲಯಕ್ಕೆ ವರ್ಗಾಯಿಸಲಾಯಿತು. ಅಲ್ಲದೆ ಪ್ರಕರಣದ ಸೂಕ್ಷ್ಮತೆ, ಸಂಕೀರ್ಣತೆಯನ್ನು ಗಮನಿಸಿ ನ್ಯಾಯದಾನದಲ್ಲಿ 25- 30 ವರುಷಗಳ ಅನುಭವ ಇರುವವರೇ ಪ್ರಕರಣ ಗಮನಿಸಬೇಕು ಎಂದು ತೀರ್ಮಾನಿಸಲಾಯಿತು.

ಶಿವಲಿಂಗ ಹಾಗೂ ಮಸೀದಿಯಲ್ಲಿನ ನಮಾಝ್ ಇತ್ಯಾದಿ ರಕ್ಷಣೆಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟು ಆದೇಶಿಸಿತಲ್ಲದೆ ಎರಡೂ ಪಕ್ಷಗಳು ಮೇಲಿನ ಕೋರ್ಟಿಗೆ ಹೋಗುವುದಾದರೆ ಎಂಟು ವಾರಗಳ ಕಾಲಾವಕಾಶ ನೀಡಿತು.

ವಾರಣಾಸಿ ಜಿಲ್ಲಾ ಜಡ್ಜ್ ವ್ಯಾಜ್ಯ ಆಲಿಸುವ ಪ್ರಕ್ರಿಯೆ ಮುಂದುವರಿದಿದೆ.



Join Whatsapp